
ಟಾಕ್ಸಿಕ್ ಕೇವಲ ಆಕ್ಷನ್ ಸಿನಿಮಾ ಅಲ್ಲ, ಇದು ಇಂದಿನ ತಲೆಮಾರಿನ ಪ್ರೇಮಕಥೆ ಎಂದು ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.
ಟಾಕ್ಸಿಕ್ ಕೇವಲ ಆಕ್ಷನ್ ಅಲ್ಲ, ಆಧುನಿಕ ಪ್ರೇಮಕಥೆ: ಕಿಯಾರಾ ಅಡ್ವಾಣಿ
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಆಕ್ಷನ್ ಜೊತೆಗೆ ಇಂದಿನ ತಲೆಮಾರಿನ ಭಿನ್ನ ಪ್ರೇಮಕಥೆಯನ್ನು ಹೊಂದಿದ್ದು, ಗಂಡು-ಹೆಣ್ಣಿನ ಸಂಬಂಧದ ದೃಷ್ಟಿಕೋನ ಬದಲಿಸಲಿದೆ ಎಂದ ನಟಿ ಕಿಯಾರಾ ಅಡ್ವಾಣಿ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಕ್ಷನ್ ಮತ್ತು ಹೈ-ವೋಲ್ಟೇಜ್ ಡ್ರಾಮಾವನ್ನು ಒಳಗೊಂಡಿದ್ದರೂ ಚಿತ್ರದ ನಿಜವಾದ ಜೀವಾಳ ಇರುವುದು ಇಂದಿನ ತಲೆಮಾರಿನ ಪ್ರೇಮಕಥೆ ಮತ್ತು ಸಂಬಂಧಗಳ ಸುತ್ತ ಎಂದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾ, ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಂಬಂಧದ ದೃಷ್ಟಿಕೋನವನ್ನೇ ಬದಲಾಯಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಚಿತ್ರದ ಕುರಿತು ಮಾತನಾಡಿರುವ ಕಿಯಾರಾ, ಈ ಸಿನಿಮಾದಲ್ಲಿ ತಾವು ನಟಿಸಿರುವ 'ನಾಡಿಯಾ' ಎಂಬ ಪಾತ್ರವು ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ತಮಗಿದ್ದ ಕಲ್ಪನೆಯನ್ನೇ ಮರುಚಿಂತನೆ ನಡೆಸುವಂತೆ ಮಾಡಿತು ಎಂದಿದ್ದಾರೆ. ಗೀತು ಮೋಹನ್ ದಾಸ್ ಅವರು ಕಥೆ ಹೇಳಿದಾಗ, ಈ ರೀತಿಯ ಭಿನ್ನವಾದ ಸಂಬಂಧಗಳೂ ಇರಲು ಸಾಧ್ಯವೇ ಎಂಬ ಆಶ್ಚರ್ಯ ಕಾಡಿತ್ತು. ಇದು ಸಾಮಾನ್ಯ ಪ್ರೇಮಕಥೆಗಳಿಗಿಂತ ಭಿನ್ನವಾಗಿದ್ದರೂ, ಪ್ರೀತಿಯಲ್ಲಿ ಒಂದು ರೀತಿಯ ಸ್ವತಂತ್ರ ಭಾವನೆಯನ್ನು ಮೂಡಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೆ, ಚಿತ್ರದಲ್ಲಿ ತಮ್ಮ ಪಾತ್ರಕ್ಕಿರುವ ಸ್ವತಂತ್ರ ಮನೋಭಾವ ಮತ್ತು ಪ್ರಬುದ್ಧತೆ ತಮಗೆ ವೈಯಕ್ತಿಕವಾಗಿಯೂ ತುಂಬಾ ಇಷ್ಟವಾಯಿತು ಎಂದು ಕಿಯಾರಾ ಹಂಚಿಕೊಂಡಿದ್ದಾರೆ.
ಇನ್ನು ದ್ವಿಭಾಷಾ ಚಿತ್ರವಾಗಿರುವ 'ಟಾಕ್ಸಿಕ್' ಶೂಟಿಂಗ್ ಅನುಭವದ ಬಗ್ಗೆ ಮಾತನಾಡಿದ ಅವರು, ಪ್ರತಿ ದೃಶ್ಯವನ್ನು ಮೊದಲು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿ, ಆ ಬಳಿಕ ಕನ್ನಡದಲ್ಲಿ ಶೂಟ್ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಕನ್ನಡ ತಮಗೆ ಹೊಸ ಭಾಷೆಯಾಗಿದ್ದರಿಂದ, ಪ್ರತಿ ದಿನ ಶೂಟಿಂಗ್‌ಗೂ ಮುನ್ನ ಹಿಂದಿನ ರಾತ್ರಿಯೇ ಸಂಭಾಷಣೆಗಳನ್ನು ಕಂಠಪಾಠ ಮಾಡಬೇಕಾಗುತ್ತಿತ್ತು. ಇದು ಸವಾಲಾಗಿದ್ದರೂ ಕೂಡ ಚಿತ್ರೀಕರಣದ ಪ್ರಕ್ರಿಯೆ ತಮಗೆ ಹೊಸದೊಂದು ಅನುಭವ ನೀಡಿತು ಎಂದು ಹೇಳಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ.

