
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಪಾತ್ರಕ್ಕೆ ಖುಷಿ ಕಪೂರ್ ರಿಜೆಕ್ಟ್ ಆಗಿದ್ದು, ಆ ಅವಕಾಶ ಅಕ್ಕ ಜಾನ್ವಿ ಕಪೂರ್‌ಗೆ ಸಿಕ್ಕಿದೆ.
ಪೆದ್ದಿ ಚಿತ್ರದ ಆಫರ್ ಖುಷಿ ಕಪೂರ್‌ಗೆ ಬಂದಿತ್ತಾ? ಜಾನ್ವಿಗೆ ಅದೃಷ್ಟ ಒಲಿದಿದ್ದಾದರೂ ಹೇಗೆ?
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಪಾತ್ರಕ್ಕೆ ಖುಷಿ ಕಪೂರ್ ರಿಜೆಕ್ಟ್ ಆಗಿದ್ದು, ಆ ಅವಕಾಶ ಅಕ್ಕ ಜಾನ್ವಿ ಕಪೂರ್ ಪಾಲಾದ ರಹಸ್ಯವನ್ನು ನಿರ್ದೇಶಕ ಬುಚ್ಚಿ ಬಾಬು ಬಿಚ್ಚಿಟ್ಟಿದ್ದಾರೆ.
ತೆಲುಗು ಚಿತ್ರರಂಗದ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾದ ಕುರಿತು ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಈ ಚಿತ್ರದ 'ಅಚ್ಚಿಯಮ್ಮ' ಎಂಬ ಪ್ರಮುಖ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಜಾನ್ವಿ ಕಪೂರ್ ಅಲ್ಲ, ಬದಲಿಗೆ ಅವರ ತಂಗಿ ಖುಷಿ ಕಪೂರ್ ಎಂಬ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಬಹಿರಂಗಪಡಿಸಿದ್ದಾರೆ.
ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬುಚ್ಚಿ ಬಾಬು, ತಾವು ಮೊದಲು ಈ ಕಥೆಯನ್ನು ಖುಷಿ ಕಪೂರ್ ಅವರಿಗೆ ವಿವರಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಖುಷಿ ಅವರನ್ನು ಖುದ್ದಾಗಿ ಭೇಟಿಯಾದಾಗ ಆ ಪಾತ್ರಕ್ಕೆ ಅವರು ತುಂಬಾ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ ಎಂದು ತಮಗೆ ಅನಿಸಿತಂತೆ. ಸಿನಿಮಾ ರಂಗದಲ್ಲಿ ಇಂತಹ ನಿರ್ಧಾರಗಳು ಅನಿವಾರ್ಯವಾಗಿದ್ದು, ಒಂದೇ ಮನೆಯಲ್ಲಿ ತಂಗಿಯನ್ನು ಬೇಡವೆಂದು ಅಕ್ಕನಿಗೆ ಕಥೆ ಹೇಳುವಾಗ ತಮಗೆ ಕೊಂಚ ಮುಜುಗರವಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಆರಂಭದಿಂದಲೂ ಜಾನ್ವಿ ಕಪೂರ್ ಈ ಪಾತ್ರಕ್ಕೆ ಸೂಕ್ತ ಎಂದು ಅವರ ಮನಸ್ಸಿನಲ್ಲಿತ್ತು.
ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರ ಜೂನ್ 4 ರಂದು ತೆರೆಗೆ ಬರಲು ಸಜ್ಜಾಗಿದ್ದು, ಮೇ 18 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

