
ಕಾಂತಾರ ವಿವಾದದ ಹಿನ್ನೆಲೆ ಹೈಕೋರ್ಟ್ ಸೂಚನೆ ಮೇರೆಗೆ ರಹಸ್ಯವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್
'ಕಾಂತಾರ' ವಿವಾದ| ಕೊನೆಗೂ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ರಣವೀರ್ ಕ್ಷಮೆ
ಕಾಂತಾರ ಚಿತ್ರದ ದೈವದ ದೃಶ್ಯ ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಆದೇಶದ ಬೆನ್ನಲ್ಲೇ ನಟ ರಣವೀರ್ ಸಿಂಗ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
'ಕಾಂತಾರ' ಚಲನಚಿತ್ರದ ದೈವದ ದೃಶ್ಯವನ್ನು ಅನುಕರಣೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಇಂದು ಮೈಸೂರಿನ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ನಟ ರಣವೀರ್ ಸಿಂಗ್ ಅವರು ಗುಟ್ಟಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ದೈವಾರಾಧನೆಯ ಪವಿತ್ರ ದೃಶ್ಯವನ್ನು ವೇದಿಕೆಯ ಮೇಲೆ ಅಣಕಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಕರಾವಳಿ ಭಾಗದ ದೈವಾರಾಧಕರು ಸೇರಿದಂತೆ ಸಮಸ್ತ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಟನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ಈ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯಕ್ಕೆ ನಟ ತಿದ್ದುಪಡಿ ಮಾಡಿದ ಅಫಿಡವಿಟ್ ಸಲ್ಲಿಸಿ, ಬೇಷರತ್ ಕ್ಷಮೆಯಾಚಿಸಿದ್ದರು. ರಣವೀರ್ ಸಿಂಗ್ ಅವರ ಕ್ಷಮಾಪಣೆಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಪ್ರಕರಣವನ್ನು ಇತ್ಯರ್ಥಗೊಳಿಸುವ ಮುನ್ನ ಮುಂದಿನ ನಾಲ್ಕು ವಾರಗಳ ಒಳಗಾಗಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವಂತೆ ಆದೇಶಿಸಿತ್ತು.
ನ್ಯಾಯಾಲಯದ ನಿರ್ದೇಶನದಂತೆ ಮೈಸೂರಿಗೆ ಆಗಮಿಸಿದ ನಟ ರಣವೀರ್ ಸಿಂಗ್, ಅತ್ಯಂತ ರಹಸ್ಯವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಮುಖಕ್ಕೆ ಮಾಸ್ಕ್ ಧರಿಸಿಯೇ ದೇವಸ್ಥಾನದ ಆವರಣ ಪ್ರವೇಶಿಸಿದ ಅವರು, ಗರ್ಭಗುಡಿಯ ಬಳಿ ತಲುಪಿದ ಬಳಿಕ ಮಾಸ್ಕ್ ತೆಗೆದು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಮತ್ತೊಂದೆಡೆ, ಚಲನಚಿತ್ರ ಕಾರ್ಮಿಕರ ಮಂಡಳಿಯಿಂದ ನಿಷೇಧ ಎದುರಿಸುತ್ತಿರುವ ಬೆನ್ನಲ್ಲೇ ರಣವೀರ್ ಸಿಂಗ್ ಮೈಸೂರು ದೇವಸ್ಥಾನಕ್ಕೆ ಭೇಟಿ ನೀಡಿರುವುದು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

