‘September 21’ director to represent Karnataka at World Women with Agenda 2026
x

ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ಐತಿಹಾಸಿಕ ಕ್ಷಣ! ಕಾನ್ ಚಿತ್ರೋತ್ಸವದಲ್ಲಿ ಭಾಷಣ ಮಾಡಲಿರುವ 22 ವರ್ಷದ ಕನ್ನಡದ ಯುವ ನಿರ್ದೇಶಕಿ

ಕಾನ್ ಚಿತ್ರೋತ್ಸವದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಮೊದಲಿಗರಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕರೆನ್ ಪಾತ್ರರಾಗಿದ್ದಾರೆ.


Click the Play button to hear this message in audio format

ಕರ್ನಾಟಕದ ಸಿನಿಮಾ ರಂಗಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಗರಿ ಒಲಿದುಬಂದಿದೆ. ಮಂಗಳೂರು ಮೂಲದ 22 ವರ್ಷದ ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ (Karen Kshiti Suvarna) ಅವರು ಫ್ರಾನ್ಸ್‌ನ ಪ್ರತಿಷ್ಠಿತ 79ನೇ ಕಾನ್ (Cannes Film Festival) ಚಿತ್ರೋತ್ಸವದಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕದ ಕೀರ್ತಿಪತಾಕೆಯನ್ನು ಜಾಗತಿಕ ವೇದಿಕೆಯಲ್ಲಿ ಹಾರಿಸಲು ಸಜ್ಜಾಗಿದ್ದಾರೆ.

ಫ್ರಾನ್ಸ್‌ನ ಕಾನ್ ನಗರದಲ್ಲಿ ಮೇ 12-15ರ ವರೆಗೆ ನಡೆಯಲಿರುವ ಪ್ರತಿಷ್ಠಿತ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ (World Woman Cannes Agenda) ಕಾರ್ಯಕ್ರಮದಲ್ಲಿ ಕರೆನ್ ಅವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸುತ್ತಿದ್ದಾರೆ. ಇದರೊಂದಿಗೆ ಕಾನ್ ಚಿತ್ರೋತ್ಸವದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮೊದಲಿಗರಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕರೆನ್ ಪಾತ್ರರಾಗಿದ್ದಾರೆ.

ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

'ವರ್ಲ್ಡ್ ವುಮನ್ ಕಾನ್ ಅಜೆಂಡಾ'ದಲ್ಲಿ ಏನಿದೆ?

ವರ್ಲ್ಡ್ ವುಮನ್ ಫೌಂಡೇಶನ್ ಆಯೋಜಿಸಿರುವ ಈ ಬಾರಿಯ ಜಾಗತಿಕ ವೇದಿಕೆಯು ‘AI, Artistry & Activism’ (ಕೃತಕ ಬುದ್ಧಿಮತ್ತೆ, ಕಲೆ ಮತ್ತು ಸಾಮಾಜಿಕ ಕ್ರಿಯಾಶೀಲತೆ) ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಈ ಕಾರ್ಯಕ್ರಮದಲ್ಲಿ ಕರೆನ್ ಅವರು ಫೋರ್ಬ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್ ಸೇರಿದಂತೆ ವಿಶ್ವದ ಅನೇಕ ಪ್ರಭಾವಿ ಸಾಧಕ ಮಹಿಳೆಯರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದು, ಕೃತಕ ಬುದ್ಧಿಮತ್ತೆ (AI) ಮತ್ತು ಕರ್ನಾಟಕದ ಸ್ವತಂತ್ರ ಸಿನಿಮಾಗಳ ಕುರಿತು ಮಾತನಾಡಲಿದ್ದಾರೆ.

ಕಾನ್‌ನಲ್ಲಿ 'ಸೆಪ್ಟೆಂಬರ್ 21' ಪ್ರೀಮಿಯರ್ ಶೋ!

ಪ್ರಿಯಾಂಕಾ ಉಪೇಂದ್ರ (Priyanka Upendra) ಅಭಿನಯದ ಹಾಗೂ ಕರೆನ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸೆಪ್ಟೆಂಬರ್ 21', 79ನೇ ಕಾನ್ ಚಿತ್ರೋತ್ಸವದ 'ಮಾರ್ಶೆ ಡು ಫಿಲ್ಮ್' ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಇದು ಆಲ್ಝೈಮರ್ ಕಾಯಿಲೆಯಿಂದ ಬಳಲುವ ರೋಗಿಗಳು ಹಾಗೂ ಅವರ ಆರೈಕೆ ಮಾಡುವವರ (Caregivers) ಮೌನ ಹೋರಾಟವನ್ನು ಹೇಳುವ ಕಥೆಯಾಗಿದೆ. ಈ ಸಿನಿಮಾ ಮೇ 16ರಂದು ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದ್ದು, ಮೇ 22ರಂದು ಭಾರತದ 12 ಪ್ರಮುಖ ನಗರಗಳಲ್ಲಿ ಬಿಡುಗಡೆಯಾಗಲಿದೆ.

“ಕರ್ನಾಟಕದ ಮಣ್ಣಿನಿಂದ ಕಾನ್‌ನ ಕೆಂಪು ಕಾರ್ಪೆಟ್‌ವರೆಗೆ ಇದು ಕೇವಲ ನನ್ನೊಬ್ಬಳ ಪಯಣವಲ್ಲ, ಇದು ಕನ್ನಡ ಸಿನಿಮಾ ಮತ್ತು ನಮ್ಮ ರಾಜ್ಯದ ಪ್ರತಿಯೊಬ್ಬ ಯುವ ಕಲಾವಿದೆಯ ಕನಸಿನ ಪಯಣ. ಈ ವೇದಿಕೆ ಕಲ್ಪಿಸಿದ ವರ್ಲ್ಡ್ ವುಮನ್ ಫೌಂಡೇಶನ್‌ಗೆ ನಾನು ಕನ್ನಡ ನಾಡಿನ ಪರವಾಗಿ ಆಭಾರಿ” ಎಂದು ಕರೆನ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗವು ಡಾ. ರಾಜ್‌ಕುಮಾರ್, ಗಿರೀಶ್ ಕಾಸರವಳ್ಳಿಯಿಂದ ಹಿಡಿದು ಇಂದಿನ ನವ-ತರಂಗ ನಿರ್ದೇಶಕರವರೆಗೆ ವಿಶ್ವ ಸಿನಿಮಾಕ್ಕೆ ನೀಡಿದ ಕೊಡುಗೆ ಅಪಾರ. ಇದೀಗ 22 ವರ್ಷದ ಕರೆನ್ ಕ್ಷಿತಿ ಸುವರ್ಣ ಅವರ ಕಾನ್ ಪಯಣವು ಆ ಪರಂಪರೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ.

Read More
Next Story