
ಶಸ್ತ್ರಸಜ್ಜಿತ ಭಯೋತ್ಪಾದನೆಯೆದುರು ಧೈರ್ಯದಿಂದ ರೋಗಿಗಳನ್ನು ರಕ್ಷಿಸಲು ನಿಂತ ನರ್ಸ್ ಕಂಗನಾ ರಣಾವತ್!
ಕಂಗನಾ ರಣಾವತ್ ಅಭಿನಯದ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಕಂಗನಾ ರಣಾವತ್ ನಟನೆಯ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 26/11 ದಾಳಿ ವೇಳೆ 400 ರೋಗಿಗಳನ್ನು ರಕ್ಷಿಸಿದ ಧೈರ್ಯಶಾಲಿ ನರ್ಸ್ ಪಾತ್ರದಲ್ಲಿ ಕಂಗನಾ ಮಿಂಚಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಕಂಗನಾ ರಣಾವತ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಭಾರತ್ ಭಾಗ್ಯ ವಿಧಾತಾ' ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.
ಚಿತ್ರದಲ್ಲಿ ಕಂಗನಾ ಅವರು ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್‌ನಲ್ಲಿ ಕಂಗನಾ ಅವರ ಮುಖದ ಮೇಲೆ ಗಾಯದ ಗುರುತು ಮತ್ತು ರಕ್ತದ ಕಲೆಗಳಿದ್ದು, ಅವರು ಬೆಂಕಿಯ ಮಧ್ಯೆ ನಡೆದುಕೊಂಡು ಬಂದು ರೋಗಿಯೊಬ್ಬರಿಗೆ ಸಹಾಯ ಮಾಡುತ್ತಿರುವುದನ್ನು ಕಾಣಬಹುದು.
ಈ ಚಿತ್ರವು ಮುಂಬೈನ 26/11 ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕಾಮಾ ಮತ್ತು ಅಲ್ಬ್ಲೆಸ್ ಆಸ್ಪತ್ರೆಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ. ಭಯೋತ್ಪಾದಕರು ದಾಳಿ ಮಾಡಿದಾಗ ಆಸ್ಪತ್ರೆಯ ಸಿಬ್ಬಂದಿ ಧೈರ್ಯದಿಂದ ಹೋರಾಡಿ ಸುಮಾರು 400 ರೋಗಿಗಳ ಪ್ರಾಣವನ್ನು ಹೇಗೆ ಉಳಿಸಿದರೆಂಬ ರೋಮಾಂಚಕ ಕಥೆಯನ್ನು ಸಿನಿಮಾ ಒಳಗೊಂಡಿದೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಕಂಗನಾ, ನಾವು ಯಾವಾಗಲೂ ಅಬ್ಬರದ ವೀರತ್ವವನ್ನು ಕೊಂಡಾಡುತ್ತೇವೆ, ಆದರೆ, ನಿಜವಾದ ಧೈರ್ಯವು ಅತ್ಯಂತ ಶಾಂತವಾಗಿರುತ್ತದೆ. ಕಷ್ಟದ ಸಮಯದಲ್ಲಿ ಜವಾಬ್ದಾರಿ ಹೊತ್ತು ನಿಲ್ಲುವ ಇಂತಹ ಸಾಮಾನ್ಯ ಜನರ ದೇಶಭಕ್ತಿ ಮತ್ತು ತ್ಯಾಗದ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಮನೋಜ್ ತಪಾಡಿಯಾ ಅವರ ಬರಹ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಗಿರಿಜಾ ಓಕ್, ಸ್ಮಿತಾ ತಾಂಬೆ, ಅಮೃತಾ ನಾಮದೇವ್ ಸೇರಿದಂತೆ ಪ್ರಮುಖ ತಾರಾಗಣವಿದೆ. ಈ ಚಿತ್ರವು ಜೂನ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಕ್ಕೆ ಭಾರಿ ಪೈಪೋಟಿ ಎದುರಾಗಲಿದ್ದು, ಅದೇ ದಿನ ಇಮ್ತಿಯಾಜ್ ಅಲಿ ನಿರ್ದೇಶನದ 'ಮೇನ್ ವಾಪಸ್ ಆವುಂಗಾ' ಮತ್ತು ಮನೋಜ್ ಬಾಜಪೇಯಿ ನಟನೆಯ 'ಗವರ್ನರ್: ದಿ ಸೈಲೆಂಟ್ ಸೇವಿಯರ್' ಸೇರಿದಂತೆ ಹಲವು ಹಿಂದಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ಕಂಗನಾ ಅವರ ಇತ್ತೀಚಿನ ಚಿತ್ರಗಳಾದ ಎಮರ್ಜೆನ್ಸಿ ಮತ್ತು ತೇಜಸ್ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ಈ ಹೊಸ ಚಿತ್ರದ ಮೇಲೆ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಗಳಿವೆ.

