Kamal Haasan| ಸಿನಿಮಾ ವೆಚ್ಚ ಕಡಿತಕ್ಕೆ ಕಮಲ್ ಹಾಸನ್ ಕರೆ- ಶೂಟಿಂಗ್‌ಗೆ ಬ್ರೇಕ್‌!
x

ಸಿನಿಮಾ ನಿರ್ಮಾಣ ವೆಚ್ಚ ಕಡಿತಗೊಳಿಸುವಂತೆ ಕಮಲ್ ಹಾಸನ್ ಕರೆ. 

Kamal Haasan| ಸಿನಿಮಾ ವೆಚ್ಚ ಕಡಿತಕ್ಕೆ ಕಮಲ್ ಹಾಸನ್ ಕರೆ- ಶೂಟಿಂಗ್‌ಗೆ ಬ್ರೇಕ್‌!

ಸಿನಿಮಾ ನಿರ್ಮಾಣ ವೆಚ್ಚ ಕಡಿತಗೊಳಿಸುವಂತೆ ಕಮಲ್ ಹಾಸನ್ ನೀಡಿದ ಕರೆಗೆ ಕಲ್ಕಿ ಹಾಗೂ ಪುಲಿ ಚಿತ್ರದ ನಿರ್ಮಾಪಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಚಿತ್ರರಂಗದಲ್ಲಿ ಅನಗತ್ಯ ಸಿನಿಮಾ ನಿರ್ಮಾಣ ವೆಚ್ಚಗಳನ್ನು ಕಡಿತಗೊಳಿಸುವಂತೆ ಹಿರಿಯ ನಟ ಮತ್ತು ರಾಜ್ಯಸಭಾ ಸಂಸದ ಕಮಲ್ ಹಾಸನ್ ಮುಕ್ತ ಪತ್ರದ ಮೂಲಕ ಕರೆ ನೀಡಿದ್ದಾರೆ.

ಪ್ರಸ್ತುತ ಚಿತ್ರರಂಗದಲ್ಲಿ ಬಜೆಟ್‌ಗಳು ಗಗನಕ್ಕೇರುತ್ತಿದ್ದು, ಮಾರುಕಟ್ಟೆಯಿಂದ ಹೂಡಿಕೆ ಮರಳಿ ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚುತ್ತಿರುವ ಇಂಧನ ದರ ಮತ್ತು ಹಣದುಬ್ಬರದಿಂದಾಗಿ ಭವಿಷ್ಯದಲ್ಲಿ ಮನರಂಜನೆಗಾಗಿ ಸಾರ್ವಜನಿಕರು ಮಾಡುವ ವೆಚ್ಚವೂ ಬದಲಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಯೋಜನಾ ರಹಿತ ಚಿತ್ರೀಕರಣ, ದುಬಾರಿ ವಿದೇಶಿ ಪ್ರವಾಸಗಳು, ಅನಗತ್ಯ ನಿರ್ಮಾಣ ವಿಳಂಬ ಮತ್ತು ಐಷಾರಾಮಿ ಸಂಸ್ಕೃತಿಯಿಂದಾಗಿ ವೆಚ್ಚ ಹೆಚ್ಚಾಗುತ್ತಿದೆಯೇ ಹೊರತು ಕೇವಲ ದೊಡ್ಡ ಬಜೆಟ್‌ನಿಂದ ಸಿನಿಮಾ ಶ್ರೀಮಂತವಾಗುವುದಿಲ್ಲ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆರ್ಥಿಕ ಶಿಸ್ತು ತರುವ ನೆಪದಲ್ಲಿ ಸಿನಿಮಾದ ದಿನಗೂಲಿ ಕಾರ್ಮಿಕರ ವೇತನ, ಸುರಕ್ಷತೆ ಅಥವಾ ಸೌಲಭ್ಯಗಳಿಗೆ ಯಾವುದೇ ಧಕ್ಕೆ ಬರಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈಭವೋಪೇತ ವೆಚ್ಚಗಳಿಗಿಂತ ಕಥೆಯ ಸ್ಪಷ್ಟತೆ ಮತ್ತು ಶಿಸ್ತು ಸಿನಿಮಾವನ್ನು ಯಶಸ್ವಿಗೊಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಮಲ್ ಹಾಸನ್ ಅವರ ಈ ಆರ್ಥಿಕ ಶಿಸ್ತಿನ ಕರೆಗೆ ಚಿತ್ರರಂಗದ ಪ್ರಮುಖ ನಿರ್ಮಾಪಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಕಮಲ್ ಹಾಸನ್ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆಯು ಅವರ ಪತ್ರವನ್ನು ಹಂಚಿಕೊಂಡು, ಚಿತ್ರರಂಗದ ಈ ನಿರ್ಣಾಯಕ ಸಮಯದಲ್ಲಿ ಜವಾಬ್ದಾರಿಯುತ ಕ್ರಮಗಳ ಬಗ್ಗೆ ಮೊದಲು ಧ್ವನಿ ಎತ್ತಿದ ಕಮಲ್ ಹಾಸನ್ ಅವರ ನಡೆ ಶ್ಲಾಘನೀಯ ಎಂದು ಹೇಳಿದೆ.

ಇದೇ ವೇಳೆ ತಮಿಳಿನ ‘ಪುಲಿ’ ಮತ್ತು ‘ಸಾಮಿ ಸ್ಕ್ವೇರ್’ ಚಿತ್ರಗಳ ನಿರ್ಮಾಪಕ ಶಿಬು ತಮೀನ್ಸ್ ಕೂಡ ಕಮಲ್ ಹಾಸನ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಚಿತ್ರರಂಗಕ್ಕೆ ಇಂತಹ ಶಿಸ್ತು ಪ್ರಸ್ತುತ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿರುವ ಅವರು, ಈ ವೆಚ್ಚ ನಿಯಂತ್ರಣದ ಶಿಸ್ತು ಕಥೆಯ ಬೆಳವಣಿಗೆಯ ಹಂತದಿಂದಲೇ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಬಜೆಟ್‌ನಲ್ಲಿ ಮೂಡಿಬಂದು ಭಾರಿ ಯಶಸ್ಸು ಕಂಡ ಹಲವು ಮಲಯಾಳಂ ಸಿನಿಮಾಗಳನ್ನು ಚಿತ್ರರಂಗಕ್ಕೆ ಮಾದರಿಯಾಗಿ ತೆಗೆದುಕೊಳ್ಳಬಹುದು ಎಂದು ಅವರು ಉಲ್ಲೇಖಿಸಿದ್ದಾರೆ. ಸದ್ಯ ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಮುಂದುವರಿದ ಭಾಗ ಹಾಗೂ ರಜನಿಕಾಂತ್ ಅವರೊಂದಿಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Read More
Next Story