ಕಲ್ಕಿ 2898 AD ಭಾಗ 2| 2027ರ ಡಿಸೆಂಬರ್‌ನಲ್ಲಿ ಬಿಡುಗಡೆ ಖಚಿತ
x

ಪ್ರಭಾಸ್ ನಟನೆಯ 'ಕಲ್ಕಿ 2' ಡಿಸೆಂಬರ್ 2027ಕ್ಕೆ ಬಿಡುಗಡೆ

ಕಲ್ಕಿ 2898 AD ಭಾಗ 2| 2027ರ ಡಿಸೆಂಬರ್‌ನಲ್ಲಿ ಬಿಡುಗಡೆ ಖಚಿತ

ಪ್ರಭಾಸ್ ನಟನೆಯ 'ಕಲ್ಕಿ 2' ಡಿಸೆಂಬರ್ 2027ಕ್ಕೆ ಬಿಡುಗಡೆ! ಸಾಯಿ ಪಲ್ಲವಿ ಸೇರ್ಪಡೆ ಹಾಗೂ ಅವೆಂಜರ್ಸ್ ಜೊತೆ ಬಾಕ್ಸ್ ಆಫೀಸ್ ಪೈಪೋಟಿ ಕುರಿತಾದ ಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಕಲ್ಕಿ 2898 AD ಚಿತ್ರದ ಭರ್ಜರಿ ಯಶಸ್ಸಿನ ನಂತರ ಇದೀಗ ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಮಹಾಕಾವ್ಯವು 2027ರ ಡಿಸೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ರೆಬೆಲ್ ಸ್ಟಾರ್ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣವು 2027ರ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಬಾರಿ ಚಿತ್ರದಲ್ಲಿ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಎರಡನೇ ಭಾಗವು ಮೊದಲ ಭಾಗದ ಅಂತ್ಯದಿಂದಲೇ ಮುಂದುವರಿಯಲಿದ್ದು, ಸುಪ್ರೀಂ ಯಾಸ್ಕಿನ್ ಮತ್ತು ಕಲ್ಕಿಯ ನಡುವಿನ ಅಂತಿಮ ಯುದ್ಧದ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಸಿನಿಮಾದಲ್ಲಿ ಅತೀ ಹೆಚ್ಚು ದೃಶ್ಯ ವೈಭವ ಮತ್ತು ಗ್ರಾಫಿಕ್ಸ್ ಕೆಲಸಗಳು ಇರುವುದರಿಂದ ಚಿತ್ರತಂಡವು ಸುದೀರ್ಘವಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಯೋಜಿಸಿದೆ. ಮೊದಲ ಭಾಗಕ್ಕಿಂತಲೂ ಈ ಸೀಕ್ವೆಲ್ ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದ್ದು, ಪ್ರೇಕ್ಷಕರಿಗೆ ಹೊಸ ಲೋಕದ ಅನುಭವ ನೀಡಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಇನ್ನು 2027ರ ಡಿಸೆಂಬರ್ ತಿಂಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸಂಘರ್ಷಕ್ಕೆ ಸಾಕ್ಷಿಯಾಗಲಿದೆ. ಕಲ್ಕಿ 2 ಚಿತ್ರವು ಹಾಲಿವುಡ್‌ನ ಬಹುನಿರೀಕ್ಷಿತ 'ಅವೆಂಜರ್ಸ್‌: ಸೀಕ್ರೆಟ್ ವಾರ್ಸ್' ಮತ್ತು 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಚಿತ್ರಗಳೊಂದಿಗೆ ಪೈಪೋಟಿ ನಡೆಸಲಿದೆ. ಇದರ ಜೊತೆಗೆ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ 'ತುಂಬ್ಬಾಡ್ 2' ಸಿನಿಮಾ ಕೂಡ ಇದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಎಲ್ಲಾ ದೊಡ್ಡ ಸಿನಿಮಾಗಳ ನಡುವೆ ಕಲ್ಕಿ 2 ತನ್ನದೇ ಆದ ಪ್ರಭಾವ ಬೀರಲು ಸಿದ್ಧವಾಗುತ್ತಿದೆ.

ಮೊದಲ ಭಾಗದಲ್ಲಿ 'ಸುಮತಿ' ಪಾತ್ರದ ಮೂಲಕ ಗಮನ ಸೆಳೆದಿದ್ದ ದೀಪಿಕಾ, ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರು ಎರಡನೇ ಭಾಗಕ್ಕಾಗಿ ತಮ್ಮ ಸಂಭಾವನೆಯನ್ನು ಶೇಕಡಾ 25 ರಿಂದ 35 ರಷ್ಟು ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಮಗುವಿನ ಆರೈಕೆಗಾಗಿ ಕೆಲಸದ ಅವಧಿಯನ್ನು ದಿನಕ್ಕೆ ಕೇವಲ 7 ರಿಂದ 8 ಗಂಟೆಗಳಿಗೆ ಸೀಮಿತಗೊಳಿಸಬೇಕು ಮತ್ತು ತಮ್ಮ ವೈಯಕ್ತಿಕ ಸಿಬ್ಬಂದಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೇಡಿಕೆಗಳನ್ನು ಪೂರೈಸಲು ನಿರ್ಮಾಪಕರು ಒಪ್ಪದ ಕಾರಣ, ವೈಜಯಂತಿ ಮೂವೀಸ್ ಅಧಿಕೃತವಾಗಿ ದೀಪಿಕಾ ಅವರೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಘೋಷಿಸಿತ್ತು.

Read More
Next Story