
ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಡ್ರ್ಯಾಗನ್ ಗ್ಲಿಂಪ್ಸ್ ಬಿಡುಗಡೆ!
Dragon| ಧೂಳೆಬ್ಬಿಸಿದ ಡ್ರ್ಯಾಗನ್ ಗ್ಲಿಂಪ್ಸ್; ಪ್ರಶಾಂತ್ ನೀಲ್-ಎನ್‌ಟಿಆರ್ ಅಪ್ಪುಗೆ ವೈರಲ್
ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಡ್ರ್ಯಾಗನ್ ಗ್ಲಿಂಪ್ಸ್ ಬಿಡುಗಡೆ. ನಟ ಎನ್‌ಟಿಆರ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಬಿಗಿಯಪ್ಪಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಟಾಲಿವುಡ್‌ನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಡ್ರ್ಯಾಗನ್' ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬದ ಮುನ್ನಾದಿನ ಅಂದರೆ ಮೇ 19 ರ ತಡರಾತ್ರಿ 11:52 ಕ್ಕೆ ಈ ವಿಶೇಷ ಝಲಕ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಈ ರೋಮಾಂಚಕ ಗ್ಲಿಂಪ್ಸ್ ಬಿಡುಗಡೆಯಾದ ತಕ್ಷಣ, ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಪರಸ್ಪರ ಬಿಗಿಯಾಗಿ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ಈ ಆಪ್ತ ಕ್ಷಣದ ಫೋಟೋವನ್ನು ಚಿತ್ರದ ನಿರ್ಮಾಣ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಈ ಜೋಡಿಯ ಮೊದಲ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಗ್ಲಿಂಪ್ಸ್ ಬಿಡುಗಡೆಯಾದ ನಂತರ ನಟ ಜೂನಿಯರ್ ಎನ್‌ಟಿಆರ್ ತಡರಾತ್ರಿಯೇ ತಮ್ಮ ಮನೆಯಿಂದ ಹೊರಬಂದು, ಹುಟ್ಟುಹಬ್ಬದ ಶುಭಾಶಯ ಕೋರಲು ನೆರೆದಿದ್ದ ನೂರಾರು ಅಭಿಮಾನಿಗಳತ್ತ ಕೈಬೀಸಿದರು. ಈ ವೇಳೆ ಅಭಿಮಾನಿಗಳನ್ನು ತಳ್ಳಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗಳ ವಿರುದ್ಧ ತಾರಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವು 1967ರ ಕಾಲಘಟ್ಟದ ಅಫೀಮು ಮಾಫಿಯಾ ಹಾಗೂ ಜಾಗತಿಕ ಡ್ರಗ್ಸ್ ಯುದ್ಧದ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರು ಅಫ್ಘಾನ್ ಟ್ರೇಡಿಂಗ್ ಕಂಪನಿಯ ಕಮಾಂಡರ್-ಇನ್-ಚೀಫ್ ಹಾಗೂ ಕ್ರೂರ ಹಂತಕ 'ಲೂಗರ್' ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಗ್ಲಿಂಪ್ಸ್‌ನಲ್ಲಿ ಅವರ "ದೇವರು ನನಗೊಂದು ವರ ಕೊಟ್ಟಿದ್ದಾನೆ, ಟ್ರಿಗರ್ ಒತ್ತಿದ ತಕ್ಷಣ ಎಲ್ಲವನ್ನೂ ಮರೆತುಬಿಡುತ್ತೇನೆ" ಎಂಬ ಖಡಕ್ ಡೈಲಾಗ್ ಹೈಲೈಟ್ ಆಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಧಮಾಕಾ ಸಿನಿಮಾ 2027ರ ಜೂನ್ 11ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

