ಅವರ ಧ್ವನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಎಸ್. ಜಾನಕಿಗೆ ಜಯಮಾಲಾ ಭಾವನಾತ್ಮಕ ನಮನ
x

ಎಸ್. ಜಾನಕಿ ಅವರ ನಿಧನಕ್ಕೆ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾ ಭಾವುಕ ನಮನ ಸಲ್ಲಿಸಿದ್ದಾರೆ.

'ಅವರ ಧ್ವನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ'; ಎಸ್. ಜಾನಕಿಗೆ ಜಯಮಾಲಾ ಭಾವನಾತ್ಮಕ ನಮನ

ಎಸ್. ಜಾನಕಿ ಅವರ ನಿಧನಕ್ಕೆ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾ ಭಾವುಕ ನಮನ ಸಲ್ಲಿಸಿದ್ದಾರೆ. ಅವರ ಧ್ವನಿಯ ಮೌಲ್ಯವನ್ನು ಯಾವುದೇ ಪ್ರಶಸ್ತಿಯಿಂದ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


Click the Play button to hear this message in audio format

ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ. ಜಾನಕಿಯಮ್ಮ ಅವರ ಗಾಯನ ಪ್ರತಿಭೆ, ಸರಳ ವ್ಯಕ್ತಿತ್ವ ಮತ್ತು ಕಲೆಯ ಮೇಲಿನ ಸಮರ್ಪಣೆಯನ್ನು ಸ್ಮರಿಸಿದ ಅವರು, "ಅವರು ಕೇವಲ ಗಾಯಕಿಯಲ್ಲ, ಸಂಗೀತ ಲೋಕದ ಸರಸ್ವತಿಯಾಗಿದ್ದರು" ಎಂದು ಭಾವುಕರಾಗಿ ತಿಳಿಸಿದ್ದಾರೆ.

ಜಾನಕಿಯಮ್ಮ ಅವರಂತಹ ಕಲಾವಿದರ ಮೌಲ್ಯವನ್ನು ಯಾವುದೇ ಪ್ರಶಸ್ತಿ ಅಥವಾ ಗೌರವದಿಂದ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದ ಜಯಮಾಲಾ, ಅವರು ಹಾಡಿದ ಸಾವಿರಾರು ಹಾಡುಗಳು, ಪಡೆದ ಪ್ರಶಸ್ತಿಗಳು ಮತ್ತು ಗೌರವಗಳು ಅವರ ಸಾಧನೆಯ ಒಂದು ಭಾಗ ಮಾತ್ರ. ಆದರೆ ಅವರ ನಿಜವಾದ ಮೌಲ್ಯವನ್ನು ಅಳೆಯಲು ಸಾಧ್ಯವೇ ಇಲ್ಲ. ಭಾರತೀಯ ಚಿತ್ರರಂಗವು ಅಪರೂಪದ ಕಲಾದೇವತೆಯೊಬ್ಬರನ್ನು ಕಳೆದುಕೊಂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಪರೂಪದ ಪ್ರತಿಭೆ ಅವರಲ್ಲಿ ಇತ್ತು

ತಮ್ಮ ಸಿನಿ ಜೀವನದ ಬಹುತೇಕ ಚಿತ್ರಗಳಿಗೆ ಎಸ್. ಜಾನಕಿ ಅವರೇ ಹಿನ್ನೆಲೆ ಗಾನ ನೀಡಿದ್ದರು ಎಂದು ನೆನಪಿಸಿಕೊಂಡ ಜಯಮಾಲಾ, "ನಗು ನಗುತ್ತಾ ನೀ ಬರುವೆ", "ಪೂಜೆಸಲೆಂದೇ ಹೂಗಳ ತಂದೆ" ಸೇರಿದಂತೆ ಅನೇಕ ಹಾಡುಗಳು ಇಂದಿಗೂ ತಮ್ಮ ನೆಚ್ಚಿನ ಗೀತೆಗಳಾಗಿವೆ ಎಂದರು. ವಿಶೇಷವಾಗಿ ಮಕ್ಕಳ ಧ್ವನಿಯನ್ನೂ ಅಚ್ಚುಕಟ್ಟಾಗಿ ಅನುಕರಿಸಿ ಹಾಡುವ ಅವರ ಅದ್ಭುತ ಸಾಮರ್ಥ್ಯ ಮತ್ತಾರಲ್ಲೂ ಕಾಣದ ಅಪರೂಪದ ಪ್ರತಿಭೆಯಾಗಿತ್ತು ಎಂದು ಅವರು ಹೇಳಿದರು.

ಆ ಕಾಲದಲ್ಲಿ ಹಾಡುಗಳ ಧ್ವನಿಮುದ್ರಣವನ್ನು ನೂರಕ್ಕೂ ಹೆಚ್ಚು ವಾದ್ಯ ಕಲಾವಿದರ ಸಮ್ಮುಖದಲ್ಲಿ ಒಂದೇ ಬಾರಿ ನೇರವಾಗಿ ಮಾಡಲಾಗುತ್ತಿತ್ತು. ಅಂತಹ ಧ್ವನಿಮುದ್ರಣಗಳನ್ನು ನೇರವಾಗಿ ನೋಡುವ ಅವಕಾಶ ತಮಗೆ ಸಿಕ್ಕಿತ್ತು ಎಂದು ಜಯಮಾಲಾ ಸ್ಮರಿಸಿದರು. ನಟಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಮೂಲಕ ಜಾನಕಿಯಮ್ಮ ಅವರನ್ನು ಭೇಟಿಯಾದ ಸಂದರ್ಭವನ್ನು ನೆನೆದ ಅವರು, ಭಾಷೆ ತಿಳಿಯದಿದ್ದರೂ ಯಾವುದೇ ಅಂತರವಿಲ್ಲದಂತೆ ಆತ್ಮೀಯವಾಗಿ ಮಾತನಾಡಿಸಿ ತಮ್ಮನ್ನು ಆರಾಮವಾಗಿರಿಸಿದ ಅವರ ವಿನಯಶೀಲತೆ ಇಂದಿಗೂ ಮರೆಯಲಾಗದು ಎಂದು ಹೇಳಿದರು.

"ಜಾನಕಿಯಮ್ಮ ನನ್ನ ಚಿತ್ರಗಳಿಗೆ ಹಾಡಿದಾಗ, ಪರದೆಯ ಮೇಲೆ ನಾನೇ ಹಾಡುತ್ತಿರುವಂತೆ ಭಾಸವಾಗುತ್ತಿತ್ತು. ಅವರ ಧ್ವನಿಯಲ್ಲಿ ಪಾತ್ರದ ಭಾವನೆ ಬೆರೆತುಹೋಗುತ್ತಿತ್ತು. ಅದೇ ಅವರ ಮಾಯೆ, ಅದೇ ಅವರ ಮಹತ್ವ" ಎಂದು ಜಯಮಾಲಾ ಕಂಬನಿಯೊಂದಿಗೆ ನಮನ ಸಲ್ಲಿಸಿದರು. ಜಾನಕಿಯಮ್ಮ ಅವರ ಅಗಲಿಕೆಯೊಂದಿಗೆ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದ್ದರೂ, ಅವರ ಅಮರ ಗೀತೆಗಳು ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರಲಿವೆ ಎಂದು ಅವರು ಹೇಳಿದರು.

Read More
Next Story