
ರಜನಿಕಾಂತ್ ಅಭಿನಯದ 'ಜೈಲರ್ 2' ಸೆಟ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ 28 ವರ್ಷದ ಕಾರ್ತಿಕೇಯನ್ ಮೃತಪಟ್ಟಿದ್ದಾರೆ.
ಜೈಲರ್ 2 ಶೂಟಿಂಗ್ ಸೆಟ್‌ನಲ್ಲಿ ವಿದ್ಯುತ್ ಅವಘಡ: ತಾಂತ್ರಿಕ ಸಿಬ್ಬಂದಿ ಸಾವು
ರಜನಿಕಾಂತ್ ಅಭಿನಯದ 'ಜೈಲರ್ 2' ಸೆಟ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ 28 ವರ್ಷದ ಕಾರ್ತಿಕೇಯನ್ ಸಾವು. ಚೆನ್ನೈನ ಪಣೈಯೂರ್ ಸ್ಟುಡಿಯೋದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರಿಂದ ತನಿಖೆ ಆರಂಭವಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚೆನ್ನೈನ ಪಣೈಯೂರ್ ಬಳಿಯ ಖಾಸಗಿ ಸ್ಟುಡಿಯೋದಲ್ಲಿ ಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಕಾರ್ತಿಕೇಯನ್ ಎಂಬ ಯುವಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಲಾ ನಿರ್ದೇಶನ ತಂಡದ ಭಾಗವಾಗಿದ್ದ ಕಾರ್ತಿಕೇಯನ್ ಚಿತ್ರೀಕರಣಕ್ಕಾಗಿ ಮನೆಯೊಂದರ ಸೆಟ್ ನಿರ್ಮಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾನತ್ತೂರು ಪೊಲೀಸರು ತನಿಖೆ ಆರಂಭಿಸಿದ್ದು, ವಿದ್ಯುತ್ ಸೋರಿಕೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಎಫ್‌ಐಆರ್ ದಾಖಲಾಗಿಲ್ಲವಾದರೂ ಶೀಘ್ರದಲ್ಲೇ ಕಾನೂನು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್ 2' ಚಿತ್ರವು ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಈ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿತ್ತು.
2023 ರಲ್ಲಿ ಬಿಡುಗಡೆಯಾಗಿದ್ದ 'ಜೈಲರ್' ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡು ದಾಖಲೆ ಬರೆದಿತ್ತು. ಈಗ ಎರಡನೇ ಭಾಗದ ಚಿತ್ರೀಕರಣದ ಅಂತಿಮ ಹಂತದಲ್ಲಿ ಇಂತಹ ದುರಂತ ನಡೆದಿರುವುದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತ ತಂದಿದೆ.
ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಮತ್ತೊಮ್ಮೆ 'ಟೈಗರ್' ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸಲಿದ್ದು, ಮೊದಲ ಭಾಗದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ಮೆನನ್ ಅವರು ಈ ಸೀಕ್ವೆಲ್‌ನಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಈ ಬಾರಿ ಚಿತ್ರಕ್ಕೆ ಹೊಸ ಮೆರುಗು ನೀಡಲು ಬಹುಭಾಷಾ ನಟಿ ವಿದ್ಯಾ ಬಾಲನ್ ಅವರು ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಅಲ್ಲದೆ, ಖ್ಯಾತ ನಟ ಎಸ್‌ಜೆ ಸೂರ್ಯ ಅವರು ಚಿತ್ರದ ಪ್ರಮುಖ ಆಕರ್ಷಣೆಯಾಗಲಿದ್ದು, ಅವರ ಪಾತ್ರವು ಸಾಕಷ್ಟು ಕುತೂಹಲ ಕೆರಳಿಸಿದೆ. ಮೊದಲ ಭಾಗದಂತೆ ಈ ಚಿತ್ರದಲ್ಲೂ ಸ್ಟಾರ್ ನಟರ ಅತಿಥಿ ಪಾತ್ರಗಳು ಮುಂದುವರಿಯಲಿದ್ದು, ಮಲಯಾಳಂನ ಮೋಹನ್ ಲಾಲ್, ಕನ್ನಡದ ಶಿವ ರಾಜ್‌ಕುಮಾರ್ ಮತ್ತು ಬಾಲಿವುಡ್‌ನ ಮಿಥುನ್ ಚಕ್ರವರ್ತಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

