ಅಕ್ರಮ ಹಣ ವರ್ಗಾವಣೆ ಪ್ರಕರಣ: ಸುಪ್ರೀಂನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್
x

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸುಪ್ರೀಂ ಕೋರ್ಟ್‌ನಿಂದ ಹಿಂಪಡೆದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸುಪ್ರೀಂನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್

200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೋಷಾರೋಪಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸುಪ್ರೀಂ ಕೋರ್ಟ್‌ನಿಂದ ಹಿಂಪಡೆದಿದ್ದಾರೆ.


Click the Play button to hear this message in audio format

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು 200 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ದೆಹಲಿ ನ್ಯಾಯಾಲಯವು ತಮ್ಮ ವಿರುದ್ಧ ದೋಷಾರೋಪಣೆ ಪಟ್ಟಿ (ಚಾರ್ಜ್ ಫ್ರೇಮ್) ಸಿದ್ಧಪಡಿಸುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಜಾಕ್ವೆಲಿನ್ ಅವರ ಪರ ವಕೀಲರು ಕಾನೂನಿನ ಪ್ರಕಾರ ಲಭ್ಯವಿರುವ ಸೂಕ್ತ ಪರ್ಯಾಯ ಕಾನೂನು ವೇದಿಕೆಯಲ್ಲಿ ಪರಿಹಾರವನ್ನು ಕೋರಲು ಮತ್ತು ಈ ವಿಶೇಷ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕೆಂದು ನ್ಯಾಯಾಲಯವನ್ನು ವಿನಂತಿಸಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪೀಠವು, ಸೂಕ್ತ ಕಾನೂನು ಕ್ರಮಗಳನ್ನು ಅನುಸರಿಸಲು ನಟಿಗೆ ಸ್ವಾತಂತ್ರ್ಯ ನೀಡಿ, ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದೆ.

ಕುಖ್ಯಾತ ವಂಚಕ ಸುಕೇಶ್ ಚಂದ್ರಶೇಖರ್ ಭಾಗಿಯಾಗಿರುವ ಈ 200 ಕೋಟಿ ರೂಪಾಯಿಗಳ ಹಗರಣದಲ್ಲಿ ಮೇ 30 ರಂದು ದೆಹಲಿಯ ವಿಚಾರಣಾ ನ್ಯಾಯಾಲಯವು ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್ ಸೇರಿದಂತೆ ಇತರ 15 ಮಂದಿಯ ವಿರುದ್ಧ ಆರೋಪ ಹೊರಿಸಲು ಆದೇಶಿಸಿತ್ತು. ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಪೂರಕ ದೋಷಾರೋಪಣೆ ಪಟ್ಟಿಯಲ್ಲಿ ಜಾಕ್ವೆಲಿನ್ ಅವರನ್ನು ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಗಿತ್ತು. ಸುಕೇಶ್‌ನಿಂದ ನಟಿ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಮತ್ತು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಇಡಿ ಆರೋಪಿಸಿದೆ. ಇದೀಗ ಸುಪ್ರೀಂ ಕೋರ್ಟ್‌ನಿಂದ ಅರ್ಜಿಯನ್ನು ಹಿಂಪಡೆದಿರುವ ನಟಿ, ವಿಚಾರಣಾ ನ್ಯಾಯಾಲಯದಲ್ಲೇ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದು ತಿಳಿದುಬಂದಿದೆ.

Read More
Next Story