ಕಲ್ಕಿ 2 ಚಿತ್ರದಲ್ಲಿ ಆಲಿಯಾ ಭಟ್? ಪ್ರಭಾಸ್ ಪೋಸ್ಟ್‌ನಿಂದ ಶುರುವಾಯ್ತು ಚರ್ಚೆ
x

ನಟ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಆಲ್ಫಾ' ಚಿತ್ರದ ಟ್ರೈಲರ್ ಅನ್ನು ಹಂಚಿಕೊಳ್ಳುವ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕಲ್ಕಿ 2 ಚಿತ್ರದಲ್ಲಿ ಆಲಿಯಾ ಭಟ್? ಪ್ರಭಾಸ್ ಪೋಸ್ಟ್‌ನಿಂದ ಶುರುವಾಯ್ತು ಚರ್ಚೆ

ಕಲ್ಕಿ 2898 ಎಡಿ ಸೀಕ್ವೆಲ್‌ನಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ವದಂತಿ ಜೋರಾಗಿದೆ. ನಟ ಪ್ರಭಾಸ್ ಆಲಿಯಾ ನಟನೆಯ ಆಲ್ಫಾ ಟ್ರೈಲರ್ ಹೊಗಳಿ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕುತೂಹಲ ತೀವ್ರಗೊಂಡಿದೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.


Click the Play button to hear this message in audio format

ಬಾಲಿವುಡ್‌ನ ಸ್ಟಾರ್ ನಟಿ ಆಲಿಯಾ ಭಟ್ ಸದ್ಯ ತಮ್ಮ ಬಹುನಿರೀಕ್ಷಿತ 'ಆಲ್ಫಾ' ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ವೈಆರ್‌ಎಫ್ ಸ್ಪೈ ಯುನಿವರ್ಸ್‌ನ ಈ ಚಿತ್ರದ ಟ್ರೈಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ, ನಾಗ್ ಅಶ್ವಿನ್ ನಿರ್ದೇಶನದ ಸೂಪರ್ ಹಿಟ್ 'ಕಲ್ಕಿ 2898 ಎಡಿ' ಚಿತ್ರದ ಎರಡನೇ ಭಾಗದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಗಾಂಧಿನಗರ ಹಾಗೂ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಲ್ಕಿ ಚಿತ್ರದ ನಾಯಕ ಪ್ರಭಾಸ್ ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ನಟ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಆಲ್ಫಾ' ಚಿತ್ರದ ಟ್ರೈಲರ್ ಅನ್ನು ಹಂಚಿಕೊಳ್ಳುವ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಆಲ್ಫಾ ಟ್ರೈಲರ್ ಅದ್ಭುತವಾಗಿ ಮತ್ತು ಭರವಸೆಯಿಂದ ಕೂಡಿದೆ ಎಂದು ಬರೆದುಕೊಂಡಿರುವ ಅವರು, ಜುಲೈ 3 ರಂದು ತೆರೆಗೆ ಬರಲಿರುವ ಈ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ವೈಆರ್‌ಎಫ್ ಸಂಸ್ಥೆಗೆ ಶುಭ ಹಾರೈಸಿದ್ದಾರೆ. ಪ್ರಭಾಸ್ ಅವರ ಈ ಪೋಸ್ಟ್‌ ಅನ್ನು ಮರುಹಂಚಿಕೊಂಡಿರುವ ಆಲಿಯಾ ಭಟ್, ಸೂರ್ಯನ ಎಮೋಜಿಯೊಂದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಹಿಂದೆ ನೀಡಿದ ಹಲವು ಸಂದರ್ಶನಗಳಲ್ಲಿ ಪ್ರಭಾಸ್ ತಾವು ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರೊಂದಿಗೆ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದರು. ಅಲ್ಲದೆ ಕಾಫಿ ವಿತ್ ಕರಣ್ ಶೋನಲ್ಲಿ ಆಲಿಯಾ ಭಟ್ ಅತ್ಯುತ್ತಮ ನಟಿ ಎಂದೂ ಶ್ಲಾಘಿಸಿದ್ದರು.

ಪ್ರಭಾಸ್ ಅವರ ಈ ಪ್ರೀತಿಯ ನಡೆ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಪ್ರಭಾಸ್ ಆಲ್ಫಾ ಟ್ರೈಲರ್ ಹಂಚಿಕೊಂಡಿರುವುದೇ ಆಲಿಯಾ ಭಟ್ ಕಲ್ಕಿ ಭಾಗ ಎರಡರಲ್ಲಿ ನಟಿಸುತ್ತಿದ್ದಾರೆ ಎಂಬುದಕ್ಕೆ ಪರೋಕ್ಷ ಸಾಕ್ಷಿ ಎಂದು ಅಭಿಮಾನಿಗಳು ಎಕ್ಸ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಇನ್ನು ಆಲಿಯಾ ಭಟ್ ತಮ್ಮ ಪ್ರತಿಕ್ರಿಯೆಯಲ್ಲಿ ಸೂರ್ಯನ ಎಮೋಜಿ ಬಳಸಿರುವುದಕ್ಕೂ ಕಲ್ಕಿ ಚಿತ್ರದ 'ಕರ್ಣ'ನ ಪಾತ್ರಕ್ಕೂ ಲಿಂಕ್ ಇರಬಹುದು ಎಂದು ಸಿನಿಪ್ರೇಕ್ಷಕರು ತರ್ಕಿಸುತ್ತಿದ್ದಾರೆ. ಆಲಿಯಾ ಭಟ್ ಕಲ್ಕಿ-2 ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಗ್ಯಾರಂಟಿ ಎಂದು ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ.

ಆದರೆ ಕಲ್ಕಿ ಸೀಕ್ವೆಲ್‌ನಲ್ಲಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಚಿತ್ರತಂಡದಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಮೊದಲ ಭಾಗದಿಂದ ದೀಪಿಕಾ ಪಡುಕೋಣೆ ಅವರ ಪಾತ್ರದ ನಿರ್ಗಮನದ ನಂತರ, ಆ ಜಾಗಕ್ಕೆ ಸಾಯಿ ಪಲ್ಲವಿ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಮೂಲವೊಂದು, ಸಾಯಿ ಪಲ್ಲವಿ ಅವರನ್ನು ಸುಮ್-80 ಪಾತ್ರಕ್ಕೆ ಪರಿಗಣಿಸುತ್ತಿರುವುದು ನಿಜವಾದರೂ, ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂದು ತಿಳಿಸಿತ್ತು. ಇದೀಗ ಆಲಿಯಾ ಭಟ್ ಅವರ ಶೂಟಿಂಗ್‌ ಕುರಿತಾದ ವದಂತಿಗಳ ಬಗ್ಗೆ ಚಿತ್ರದ ವಕ್ತಾರರು ಪ್ರತಿಕ್ರಿಯಿಸಿದ್ದು, ಆಲಿಯಾ ಭಟ್ ಚಿತ್ರಕ್ಕಾಗಿ ಯಾವುದೇ ಶೂಟಿಂಗ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರೋ ಹಾಕಿದ ಪೋಸ್ಟ್ ನೋಡಿ ಎಲ್ಲರೂ ಸುದ್ದಿ ಮಾಡುತ್ತಿದ್ದಾರೆ, ಸದ್ಯಕ್ಕೆ ಅವರ ಆಯ್ಕೆಯ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟತೆ ಇಲ್ಲ ಎಂದು ಚಿತ್ರತಂಡ ಹೇಳಿದೆ.

ಇನ್ನು ಶಿವ ರಾವೈಲ್ ನಿರ್ದೇಶನದ 'ಆಲ್ಫಾ' ಚಿತ್ರವು ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಶರ್ವರಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವದಂತಿಗಳು ಏನೇ ಇದ್ದರೂ, ಪ್ರಭಾಸ್ ಮತ್ತು ಆಲಿಯಾ ಭಟ್ ಜೋಡಿಯನ್ನು ಬೆಳ್ಳಿಪರದೆಯ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಮಾತ್ರ ಕಾತರದಿಂದ ಕಾಯುತ್ತಿದ್ದಾರೆ.

Read More
Next Story