ಲಗಾನ್‌ಗೆ 25 ವರ್ಷ: ಅಮ್ಮ ರೀನಾ ದತ್ತಾ ಸಾಧನೆಗೆ ಹೆಮ್ಮೆ ಪಟ್ಟ ಇರಾ ಖಾನ್
x

ಲಗಾನ್‌ಗೆ 25 ವರ್ಷ

ಲಗಾನ್‌ಗೆ 25 ವರ್ಷ: ಅಮ್ಮ ರೀನಾ ದತ್ತಾ ಸಾಧನೆಗೆ ಹೆಮ್ಮೆ ಪಟ್ಟ ಇರಾ ಖಾನ್

ಲಗಾನ್ ಚಿತ್ರದ 25ನೇ ವರ್ಷದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದ ಆಮೀರ್ ಖಾನ್ ಪುತ್ರಿ ಇರಾ ಖಾನ್, ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದ ತಮ್ಮ ತಾಯಿ ರೀನಾ ದತ್ತಾ ಪರವಾಗಿ ಜಯಘೋಷ ಹಾಕಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಆಮೀರ್ ಖಾನ್ ನಟನೆಯ 'ಲಗಾನ್' ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ. ಈ ವಿಶೇಷ ಸಂದರ್ಭದ ಅಂಗವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದ್ದು, ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಸ್ಕ್ರೀನಿಂಗ್ ವೇಳೆ ಆಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ತಾಯಿ ರೀನಾ ದತ್ತಾ ಅವರ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಆಶುತೋಷ್ ಗೋವಾರಿಕರ್ ನಿರ್ದೇಶನದ ಈ ಐತಿಹಾಸಿಕ ಕ್ರೀಡಾ ಪ್ರಧಾನ ಚಿತ್ರಕ್ಕೆ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದರು. ಚಿತ್ರದ ವಿಶೇಷ ಪ್ರದರ್ಶನದ ವೇಳೆ ಬೆಳ್ಳಿ ಪರದೆಯ ಮೇಲೆ ರೀನಾ ದತ್ತಾ ಅವರ ಹೆಸರು ಮೂಡಿಬರುತ್ತಿದ್ದಂತೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪುತ್ರಿ ಇರಾ ಖಾನ್ ಜೋರಾಗಿ ಚಪ್ಪಾಳೆ ತಟ್ಟಿ, ಕೂಗುವ ಮೂಲಕ ಅಮ್ಮನಿಗೆ ಜಯಘೋಷ ಹಾಕಿದ್ದಾರೆ.

ಬಳಿಕ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಇರಾ ಖಾನ್, "ನನ್ನ ಅಮ್ಮ ಅತ್ಯಂತ ಸುಂದರವಾದ ಸಿನಿಮಾವನ್ನು ನಿರ್ಮಿಸಿದ್ದಾರೆ" ಎಂದು ಬರೆದುಕೊಂಡು ಹೆಮ್ಮೆಯ ಮಗಳಾಗಿ ಸಂಭ್ರಮಿಸಿದ್ದಾರೆ. ಇರಾ ಖಾನ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

2001ರಲ್ಲಿ ಬಿಡುಗಡೆಯಾಗಿದ್ದ 'ಲಗಾನ್: ಒನ್ಸ್ ಅಪಾನ್ ಎ ಟೈಮ್ ಇನ್ ಇಂಡಿಯಾ' ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತ್ತು. ಬ್ರಿಟಿಷರ ಆಡಳಿತಾವಧಿಯಲ್ಲಿ ಹಳ್ಳಿಯೊಂದರ ರೈತರು ತೆರಿಗೆ ವಿನಾಯಿತಿಗಾಗಿ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಕ್ರಿಕೆಟ್ ಪಂದ್ಯ ಆಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿತ್ತು. ಅಷ್ಟೇ ಅಲ್ಲದೆ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ವಿದೇಶಿ ಭಾಷಾ ಚಿತ್ರ' ವಿಭಾಗಕ್ಕೆ ನಾಮನಿರ್ದೇಶನಗೊಂಡ ಕೊನೆಯ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಪ್ರಸ್ತುತ ಸಿನಿಮಾ ಮರುಬಿಡುಗಡೆಯಾಗಿದ್ದು, ಮತ್ತೊಮ್ಮೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Read More
Next Story