
ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಹಾಗೂ ಗೋವಾ ಮೂಲದ ಮಾಡೆಲ್ ಸಾಧ್ವಿ ಸತೀಶ್ ಸೈಲ್ ಅವರು ನೂತನ 'ಮಿಸ್ ಇಂಡಿಯಾ ವರ್ಲ್ಡ್' ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ ಸಾಧ್ವಿಗೆ ಒಲಿಯಿತು ಮಿಸ್ ಇಂಡಿಯಾ ವರ್ಲ್ಡ್!
ದಶಕಗಳಿಂದಲೂ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಮಹತ್ತರ ಕಾರ್ಯದಲ್ಲಿ ಅವರು ಸಕ್ರಿಯವಾಗಿ ಸಾಧ್ವಿ ತೊಡಗಿಸಿಕೊಂಡಿದ್ದಾರೆ.
ದೇಶದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಾದ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2026'ರ 61ನೇ ಆವೃತ್ತಿಯು ಶನಿವಾರ ರಾತ್ರಿ ವರ್ಣರಂಜಿತವಾಗಿ ತೆರೆಕಂಡಿದೆ. ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಹಾಗೂ ಗೋವಾ ಮೂಲದ ಮಾಡೆಲ್ ಸಾಧ್ವಿ ಸತೀಶ್ ಸೈಲ್ ಅವರು ನೂತನ 'ಮಿಸ್ ಇಂಡಿಯಾ ವರ್ಲ್ಡ್' ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿರುವ 'ಕಿಟ್' (KIIT) ವಿಶ್ವವಿದ್ಯಾಲಯದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ 2024ರ ವಿಜೇತೆ ಮಧ್ಯಪ್ರದೇಶದ ನಿಕಿತಾ ಪೋರ್ವಾಲ್ ಅವರು ನೂತನ ವಿಶ್ವ ಸುಂದರಿಗೆ ಕಿರೀಟ ತೊಡಗಿಸಿದರು. ಈ ಗೆಲುವಿನೊಂದಿಗೆ ಸಾಧ್ವಿ ಅವರು ಮುಂಬರುವ 75ನೇ 'ಮಿಸ್ ವರ್ಲ್ಡ್' (ವಿಶ್ವ ಸುಂದರಿ) ಸ್ಪರ್ಧೆಯಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿದ್ದಾರೆ.
ಸಾಮಾಜಿಕ ಕಳಕಳಿಯ ಸೌಂದರ್ಯವತಿ
ಕೇವಲ ಗ್ಲಾಮರ್ ಲೋಕಕ್ಕೆ ಮಾತ್ರ ಸೀಮಿತವಾಗದ ಸಾಧ್ವಿ ಸತೀಶ್ ಸೈಲ್, ತಮ್ಮ ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ಮೂಲಕವೂ ಎಲ್ಲರ ಗಮನ ಸೆಳೆದಿದ್ದಾರೆ. ದಶಕಗಳಿಂದಲೂ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಮಹತ್ತರ ಕಾರ್ಯದಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿಯರ ಹಿತರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಫಿಟ್‌ನೆಸ್ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ಸಾಧ್ವಿ, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆಯಲ್ಲಿ ಒಟ್ಟು 30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದು, ಸಾಧ್ವಿ ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು.
ತೀವ್ರ ಪೈಪೋಟಿ, ತೀರ್ಪುಗಾರರ ಮನಗೆದ್ದ ಸಾಧ್ವಿ
ಸ್ಪರ್ಧೆಯ ಅಂತಿಮ ಹಂತದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿದ್ದು, ಮಹಾರಾಷ್ಟ್ರದ ರಾಜನಂದಿನಿ ಪವಾರ್ ಅವರು ಪ್ರಥಮ ರನ್ನರ್-ಅಪ್ (First Runner-up) ಸ್ಥಾನ ಪಡೆದುಕೊಂಡರು. ಇನ್ನು ಜಮ್ಮು ಮತ್ತು ಕಾಶ್ಮೀರದ ಡಾ. ಶ್ರೀ ಅದ್ವೈತಾ ಅವರು ದ್ವಿತೀಯ ರನ್ನರ್-ಅಪ್ (Second Runner-up) ಆಗಿ ಆಯ್ಕೆಯಾದರು. ವಿನ್ಯಾಸಕಿ ವಜಾನೆಹ್ ವಿನ್ಯಾಸಗೊಳಿಸಿದ ಬೆಳ್ಳಿಯ ಬಣ್ಣದ ಮಿನುಗುವ ಗೌನ್‌ನಲ್ಲಿ ಕಂಗೊಳಿಸಿದ ಸಾಧ್ವಿ, ತಮ್ಮ ಸೌಂದರ್ಯದ ಜೊತೆಗೆ ಅತ್ಯಂತ ಆತ್ಮವಿಶ್ವಾಸ ಭರಿತ ಮಾತುಗಳಿಂದಲೂ ತೀರ್ಪುಗಾರರ ಮನಗೆಲ್ಲುವಲ್ಲಿ ಯಶಸ್ವಿಯಾದರು.
"ನನ್ನ ಸ್ಪರ್ಧೆ ನನ್ನೊಂದಿಗೇ ಇತ್ತು" ಎಂದ ನೂತನ ಸುಂದರಿ
ಈ ಐತಿಹಾಸಿಕ ಗೆಲುವಿನ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಸಾಧ್ವಿ, "ಇದೊಂದು ನಂಬಲಾಗದ ಕ್ಷಣ" ಎಂದು ಬಣ್ಣಿಸಿದ್ದಾರೆ. ಒಂದು ಸಣ್ಣ ಪಟ್ಟಣದಿಂದ ಜಾಗತಿಕ ವೇದಿಕೆಗೆ ಬಂದಾಗ ನನಗೆ ನನ್ನ ಬಗ್ಗೆಯೇ ಹಲವು ಅನುಮಾನಗಳಿದ್ದವು, ಇತರರ ಯಶಸ್ಸನ್ನು ಕಂಡು ನನ್ನ ಸಾಮರ್ಥ್ಯವನ್ನೇ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ, ಯಾವಾಗ ನಾನು ಇತರ ಮಹಿಳೆಯರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದನ್ನು ಬಿಟ್ಟು, ಅವರನ್ನು ಬೆಂಬಲಿಸಲು ಆರಂಭಿಸಿದೆನೋ ಅಂದಿನಿಂದ ನನ್ನ ಆಲೋಚನಾ ಕ್ರಮವೇ ಬದಲಾಯಿತು ಎಂದು ಅವರು ತಮ್ಮ ಗೆಲುವಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಭಾರತದ ಸಂಕಲ್ಪ ಮತ್ತು ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವುದು ತಮಗೆ ಸಿಕ್ಕ ಬಹುದೊಡ್ಡ ಗೌರವ ಎಂದು ಸಾಧ್ವಿ ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ದೊಡ್ಡ ಗಣೇಶ್ ಅವರ ಪುತ್ರಿ ಸಮೇತಾ ಅವರು ಪ್ರತಿಷ್ಠಿತ 61ನೇ ಫೆಮಿನಾ ಮಿಸ್ ಇಂಡಿಯಾ 2026ರ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಟಾಪ್ 5 ಫೈನಲಿಸ್ಟ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

