
ಡಾನ್ 3 ಚಿತ್ರದಿಂದ ರಣ್‌ವೀರ್ ಸಿಂಗ್ ಹೊರನಡೆದಿದ್ದರಿಂದ ಎಕ್ಸೆಲ್ ಸಂಸ್ಥೆಗೆ ಭಾರಿ ನಷ್ಟವಾಗಿದೆ.
ರಣ್‌ವೀರ್ ಸಿಂಗ್ ವಿರುದ್ಧ ಎಫ್‌ಡಬ್ಲ್ಯೂಐಸಿಇ ಅಸಹಕಾರ ಅಸ್ತ್ರ
ಡಾನ್ 3 ಚಿತ್ರದಿಂದ ರಣ್‌ವೀರ್ ಸಿಂಗ್ ಹೊರನಡೆದಿದ್ದರಿಂದ ಎಕ್ಸೆಲ್ ಸಂಸ್ಥೆಗೆ ಭಾರಿ ನಷ್ಟವಾಗಿದ್ದು, ಒಕ್ಕೂಟವು ನಟನ ವಿರುದ್ಧ ಅಸಹಕಾರ ನಿರ್ದೇಶನ ಹೊರಡಿಸಿದೆ.
ಬಾಲಿವುಡ್‌ನ ಬಹುನಿರೀಕ್ಷಿತ 'ಡಾನ್ 3' ಚಿತ್ರದಿಂದ ಕೊನೆಯ ಕ್ಷಣದಲ್ಲಿ ಹೊರನಡೆದ ನಟ ರಣ್‌ವೀರ್ ಸಿಂಗ್ ವಿರುದ್ಧ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಒಕ್ಕೂಟ (FWICE) ತೀವ್ರ ಅಸಹಕಾರ ನಿರ್ದೇಶನವನ್ನು ಹೊರಡಿಸಿದೆ. ಚಿತ್ರರಂಗದ ಯಾವುದೇ ಸೂಪರ್‌ಸ್ಟಾರ್ ಕೂಡ ನಿಯಮಗಳಿಗಿಂತ ಮಿಗಿಲಾದವರಲ್ಲ ಎಂದು ಒಕ್ಕೂಟವು ಈ ಸಂದರ್ಭದಲ್ಲಿ ಖಡಕ್ ಸಂದೇಶ ರವಾನಿಸಿದೆ.
ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ಅವರ ಒಡೆತನದ ಎಕ್ಸೆಲ್ ಎಂಟರ್‌ಟೈನ್‌ಮೆಂಟ್, ರಣ್‌ವೀರ್ ಸಿಂಗ್ ಅವರ ಕೊನೆಯ ಕ್ಷಣದ ನಿರ್ಧಾರದಿಂದಾಗಿ ತಮಗೆ ಸುಮಾರು 45 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಿ ಚಲನಚಿತ್ರ ನಿರ್ದೇಶಕರ ಸಂಘಕ್ಕೆ (IFTDA) ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಎಫ್‌ಡಬ್ಲ್ಯೂಐಸಿಇ, ತನ್ನ ಮುಂದಿನ ಕ್ರಮವಾಗಿ ಈ ಅಸಹಕಾರ ನಿರ್ಧಾರವನ್ನು ಪ್ರಕಟಿಸಿದೆ.
ಚಿತ್ರದ ಪೂರ್ವಸಿದ್ಧತೆ, ಲೊಕೇಶನ್ ಹುಡುಕಾಟ ಮತ್ತು ಪ್ರೋಮೋ ಶೂಟಿಂಗ್ ಸೇರಿದಂತೆ ಎಲ್ಲಾ ಪ್ರಮುಖ ಹಂತಗಳಲ್ಲಿ ರಣ್‌ವೀರ್ ಸಿಂಗ್ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ಚಿತ್ರೀಕರಣ ಆರಂಭಕ್ಕೆ ಕೇವಲ ಮೂರು ವಾರಗಳ ಮುಂಚಿತವಾಗಿ ಅವರು ಚಿತ್ರದಿಂದ ಹೊರನಡೆದಿದ್ದಾರೆ ಎಂದು ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ರಣ್‌ವೀರ್ ಸಿಂಗ್ ಅವರಿಗೆ ಸತತ ಮೂರು ಬಾರಿ ನೋಟಿಸ್ ನೀಡಲಾಗಿದ್ದರೂ, ಅವರು ಒಕ್ಕೂಟದ ಸಭೆಗೆ ಹಾಜರಾಗದೆ ಬೇಜವಾಬ್ದಾರಿತನ ತೋರಿದ್ದಾರೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ರಣ್‌ವೀರ್ ಅವರ ಕಾರ್ಯದರ್ಶಿ ಇದು ಕಾನೂನಾತ್ಮಕ ವಿಷಯವಾಗಿದ್ದು ಒಕ್ಕೂಟದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಮೇಲ್ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಇದೀಗ ಜಾರಿಯಾಗಿರುವ ಅಸಹಕಾರ ನಿರ್ದೇಶನದ ಪ್ರಕಾರ, ಈ ವಿವಾದ ಬಗೆಹರಿಯುವವರೆಗೂ ಒಕ್ಕೂಟದ ವ್ಯಾಪ್ತಿಗೆ ಬರುವ 32 ವಿವಿಧ ವಿಭಾಗಗಳ ಯಾವುದೇ ತಂತ್ರಜ್ಞರು, ಕಾರ್ಮಿಕರು ಅಥವಾ ಸಹಾಯಕ ಸಿಬ್ಬಂದಿ ರಣ್‌ವೀರ್ ಸಿಂಗ್ ಅವರ ಚಲನಚಿತ್ರಗಳಾಗಲಿ ಅಥವಾ ಜಾಹೀರಾತುಗಳಾಗಲಿ ಯಾವುದೇ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಇದು ಕೇವಲ ರಣ್‌ವೀರ್ ಸಿಂಗ್ ಅವರಿಗೆ ಮಾತ್ರವಲ್ಲದೆ, ಇಂತಹ ಬೇಜವಾಬ್ದಾರಿ ಪ್ರವೃತ್ತಿ ತೋರುವ ಇತರೆ ಕಲಾವಿದರಿಗೂ ಎಚ್ಚರಿಕೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎನ್. ತಿವಾರಿ ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ರಣ್‌ವೀರ್ ಸಿಂಗ್ ಅವರ ವಕ್ತಾರರು, ರಣ್‌ವೀರ್ ಅವರು ಚಿತ್ರರಂಗ ಮತ್ತು 'ಡಾನ್' ಸರಣಿಯ ಮೇಲಿರುವ ಗೌರವದಿಂದಾಗಿ ಪ್ರಸ್ತುತ ಮೌನ ಕಾಯ್ದುಕೊಂಡಿದ್ದಾರೆ. ವೃತ್ತಿಪರ ವಿಷಯಗಳನ್ನು ಘನತೆ ಮತ್ತು ಪರಸ್ಪರ ಗೌರವದಿಂದ ಬಗೆಹರಿಸಿಕೊಳ್ಳಬೇಕು ಎಂದು ಅವರು ನಂಬಿದ್ದಾರೆ. ಸದ್ಯಕ್ಕೆ ಅವರು ತಮ್ಮ ಮುಂದಿನ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಒಕ್ಕೂಟವು ಈ ವಿಷಯದಲ್ಲಿ ಮಾತುಕತೆಗೆ ಸದಾ ಮುಕ್ತವಾಗಿದ್ದು, ನಟನು ಖುದ್ದಾಗಿ ಬಂದು ಚರ್ಚಿಸಿದರೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಸಿದ್ಧವಿರುವುದಾಗಿ ತಿಳಿಸಿದೆ.

