
ಫಹಾದ್ ಫಾಸಿಲ್
ದೃಶ್ಯಂ 3 ನಿರ್ಮಾಪಕರೊಂದಿಗೆ ಫಹಾದ್ ಫಾಸಿಲ್ ಹೊಸ ಬಿಗ್ ಸಿನಿಮಾ
ಮಲಯಾಳಂ ನಟ ಫಹಾದ್ ಫಾಸಿಲ್, ಪನೋರಮಾ ಸ್ಟುಡಿಯೋಸ್ ಮತ್ತು ಜೇಕಬ್ ಬಾಬು ನಿರ್ಮಾಣದ ಎರಡು ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ದು, ಈ ಚಿತ್ರಗಳು ಮುಂದಿನ ದಿನಗಳಲ್ಲಿ ತೆರೆಕಾಣಲಿವೆ.
ಸೂಪರ್ ಹಿಟ್ 'ದೃಶ್ಯಂ 3' ಚಿತ್ರದ ಯಶಸ್ಸಿನ ಬೆನ್ನಲ್ಲೇ, ಆ ಚಿತ್ರದ ನಿರ್ಮಾಣ ಸಂಸ್ಥೆ ಪನೋರಮಾ ಸ್ಟುಡಿಯೋಸ್ ಮತ್ತು ನಿರ್ಮಾಪಕ ಜೇಕಬ್ ಬಾಬು ಅವರ ಜೊತೆ ಫಹಾದ್ ಫಾಸಿಲ್ ಕೈಜೋಡಿಸಿದ್ದಾರೆ. ಈ ಸಹಭಾಗಿತ್ವದಲ್ಲಿ ಒಂದಲ್ಲ, ಒಟ್ಟು ಎರಡು ಹೊಸ ಮಲಯಾಳಂ ಸಿನಿಮಾಗಳು ಮೂಡಿಬರಲಿವೆ. ಪ್ರಸ್ತುತ ಈ ಎರಡೂ ಚಿತ್ರಗಳ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿದುಬಂದಿದೆ.
ಈ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ ಫಹಾದ್ ಫಾಸಿಲ್, ಕಥೆಯ ಗಟ್ಟಿತನ ಮತ್ತು ನಿರ್ಮಾಪಕರ ಸಿನಿಮಾ ದೃಷ್ಟಿಕೋನ ನನ್ನನ್ನು ಈ ಚಿತ್ರಗಳತ್ತ ಸೆಳೆಯಿತು ಎಂದು ಹೇಳಿದ್ದಾರೆ. ಒಬ್ಬ ನಟನಾಗಿ ನನಗೆ ಸವಾಲು ನೀಡುವ ಹಾಗೂ ಪ್ರೇಕ್ಷಕರಿಗೆ ಏನಾದರೂ ಹೊಸದನ್ನು ನೀಡುವಂತಹ ಸಿನಿಮಾಗಳ ಭಾಗವಾಗಲು ನಾನು ಯಾವಾಗಲೂ ಇಷ್ಟಪಡುತ್ತೇನೆ. ಜೇಕಬ್ ಮತ್ತು ಪನೋರಮಾ ಸ್ಟುಡಿಯೋಸ್ ತಂಡದೊಂದಿಗಿನ ಚರ್ಚೆಗಳು ನನಗೆ ಹೊಸ ಉತ್ಸಾಹ ತುಂಬಿವೆ. ಈ ಎರಡೂ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಮೂಡಿಬರುವ ಎಲ್ಲ ಸಾಧ್ಯತೆಗಳಿದ್ದು, ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಈ ಕಥೆಗಳನ್ನು ತರಲು ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಲಯಾಳಂ ಚಿತ್ರರಂಗದ ವಿಶಿಷ್ಟ ಕಥೆ ಹೇಳುವ ಶೈಲಿಯನ್ನು ಶ್ಲಾಘಿಸಿರುವ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ಫಹಾದ್ ಫಾಸಿಲ್ ಅವರು ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ತಲುಪುವ ಅದ್ಭುತ ನಟ ಎಂದು ಕೊಂಡಾಡಿದ್ದಾರೆ. ಮತ್ತೊಬ್ಬ ನಿರ್ಮಾಪಕ ಅಭಿಷೇಕ್ ಪಾಠಕ್ ಮಾತನಾಡಿ, ಕಥೆಗಳ ಚರ್ಚೆ ನಡೆಯುತ್ತಿದ್ದಾಗಲೇ ಈ ಪಾತ್ರಗಳಿಗೆ ಫಹಾದ್ ಫಾಸಿಲ್ ಅವರೇ ಸೂಕ್ತ ಆಯ್ಕೆ ಎಂಬುದು ನಮಗೆ ಸ್ಪಷ್ಟವಾಗಿತ್ತು, ಅವರ ಬಹುಮುಖ ನಟನಾ ಕೌಶಲ ಚಿತ್ರಕ್ಕೆ ದೊಡ್ಡ ಬಲ ತುಂಬಲಿದೆ ಎಂದಿದ್ದಾರೆ. ಇನ್ನು ಈ ಚಿತ್ರಗಳನ್ನು ಯಾರು ನಿರ್ದೇಶಿಸಲಿದ್ದಾರೆ ಮತ್ತು ಇತರ ತಾರಾಗಣದಲ್ಲಿ ಯಾರ ಇರಲಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

