
ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ 15 ಕೋಟಿ ಗಳಿಸಿದ ಮೋಹನ್‌ಲಾಲ್
ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಸಿನಿಮಾ ಮೊದಲ ದಿನವೇ ಭಾರತದಲ್ಲಿ 15 ರೂ.ಕೋಟಿ ಗಳಿಸಿ ಭರ್ಜರಿ ಆರಂಭ ಪಡೆದಿದೆ. ಜಾಗತಿಕವಾಗಿ 43 ರೂ.ಕೋಟಿ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ.
ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ 3’ ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಭಾರತದಾದ್ಯಂತ ಅಂದಾಜು 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
ದೇಶಾದ್ಯಂತ ಐದು ಸಾವಿರಕ್ಕೂ ಹೆಚ್ಚು ಶೋಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಮುಖ್ಯವಾಗಿ ಕೇರಳದಲ್ಲಿ ಈ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಅಲ್ಲಿನ ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ಜಾರ್ಜಕುಟ್ಟಿಯ ಪಾತ್ರವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ಮೊದಲ ದಿನವೇ ಮಲಯಾಳಂ ಆವೃತ್ತಿಯಿಂದ ಅತಿ ಹೆಚ್ಚು ಆದಾಯ ಹರಿದುಬಂದಿದ್ದು, ಉಳಿದಂತೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳ ಡಬ್ಬಿಂಗ್ ಆವೃತ್ತಿಗಳಿಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮೊದಲ ಎರಡು ಭಾಗಗಳ ಭಾರಿ ಯಶಸ್ಸಿನ ಬಳಿಕ ಮೂರನೇ ಭಾಗದ ಮೇಲಿದ್ದ ನಿರೀಕ್ಷೆಯನ್ನು ಚಿತ್ರವು ಉಳಿಸಿಕೊಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲೂ ಸಿನಿಮಾ ಹೊಸ ದಾಖಲೆ ಬರೆದಿದೆ. ವಿಶ್ವದಾದ್ಯಂತ ಕಲೆಕ್ಷನ್ ಗಮನಿಸಿದರೆ ಮೊದಲ ದಿನವೇ ಇದು 43 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಮಲಯಾಳಂ ಚಿತ್ರರಂಗದಲ್ಲಿ ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರಗಳ ಸಾಲಿಗೆ ಸೇರಿದೆ. ಕೌಟುಂಬಿಕ ಸಸ್ಪೆನ್ಸ್ ಮತ್ತು ರೋಚಕ ಟ್ವಿಸ್ಟ್‌ಗಳಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ‘ದೃಶ್ಯಂ 3’ ಯಶಸ್ವಿಯಾಗಿದ್ದು, ವೀಕೆಂಡ್‌ನಲ್ಲಿ ಈ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

