
ನೆಟ್‌ಫ್ಲಿಕ್ಸ್‌ನಲ್ಲಿ ಮೇ 22 ಕ್ಕೆ ಧುರಂಧರ್ ಭಾಗ-1 ರ ಅನ್‌ಕಟ್ ವರ್ಷನ್ ಬಿಡುಗಡೆಯಾಗುತ್ತಿದೆ.
Dhurandhar OTT release date
ನೆಟ್‌ಫ್ಲಿಕ್ಸ್ ಪೋಸ್ಟರ್‌ನಿಂದ ಗೊಂದಲ; ಧುರಂಧರ್ ಸಿನಿಮಾ ಬಿಡುಗಡೆ ಯಾವಾಗ?
ನೆಟ್‌ಫ್ಲಿಕ್ಸ್‌ನಲ್ಲಿ ಮೇ 22 ಕ್ಕೆ ಧುರಂಧರ್ ಭಾಗ-1 ರ ಅನ್‌ಕಟ್ ವರ್ಷನ್ ಬಿಡುಗಡೆಯಾಗುತ್ತಿದ್ದು, ಇದನ್ನು ಭಾಗ-2 ರ ರಿಲೀಸ್ ಡೇಟ್ ಎಂದು ನೆಟ್ಟಿಗರು ತಪ್ಪಾಗಿ ಭಾವಿಸಿದ್ದಾರೆ.
ಬಾಲಿವುಡ್‌ನ ಬಹುನಿರೀಕ್ಷಿತ 'ಧುರಂಧರ್' ಚಿತ್ರದ ಓಟಿಟಿ ರಿಲೀಸ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ಹಂಚಿಕೊಂಡ ಹೊಸ ಪೋಸ್ಟರ್ ನೋಡಿ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದು, ಅಸಲಿ ಕಥೆ ಏನೆಂದು ತಿಳಿದು ಈಗ ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಗೊಂದಲ?
ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' (ಧುರಂಧರ್-೨) ಚಿತ್ರದ ಭಾರತೀಯ ಓಟಿಟಿ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಜೂನ್ ೪ ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಮತ್ತು ಜೂನ್ ೧೯ ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ ಎಂದು ಈ ಹಿಂದೆ ಅಧಿಕೃತವಾಗಿ ಪ್ರಕಟಿಸಲಾಗಿತ್ತು.
ಆದರೆ, ಗುರುವಾರ ಬೆಳ್ಳಂಬೆಳಗ್ಗೆ ನೆಟ್‌ಫ್ಲಿಕ್ಸ್ ತನ್ನ ಅಧಿಕೃತ ಖಾತೆಯಲ್ಲಿ, "ಆಂಧಿ ಆ ರಹೀ ಹೈ.. ಔರ್ ಇಸ್ ಬಾರ್, ಎಕ್ಸ್‌ಟ್ರಾ ಘಾತಕ್! ಧುರಂಧರ್ ರಾ ಅಂಡ್ ಅನ್‌ದೇಖಾ ಮೇ 22 ಕ್ಕೆ ಬಿಡುಗಡೆ" ಎಂದು ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಇದನ್ನು ನೋಡಿದ ನೆಟ್ಟಿಗರು, ಜೂನ್‌ನಲ್ಲಿ ಬರಬೇಕಿದ್ದ ಸೀಕ್ವೆಲ್ (ಭಾಗ-2) ಚಿತ್ರದ ರಿಲೀಸ್ ಡೇಟ್ ಅನ್ನು ಒಂದು ತಿಂಗಳು ಮುಂಚಿತವಾಗಿಯೇ ಅಂದರೆ ಮೇ 22 ಕ್ಕೆ ಪ್ರಿಪೋನ್ ಮಾಡಲಾಗಿದೆ ಎಂದು ತಪ್ಪಾಗಿ ಭಾವಿಸಿ ಸಂಭ್ರಮಿಸಲು ಶುರು ಮಾಡಿದ್ದರು.
ಅಸಲಿ ಕಥೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸಿನಿಮಾ ಪ್ರೇಮಿಗಳು ಕಮೆಂಟ್ ಬಾಕ್ಸ್‌ನಲ್ಲಿ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಮೇ 22 ಕ್ಕೆ ಬಿಡುಗಡೆಯಾಗುತ್ತಿರುವುದು 'ಧುರಂಧರ್ ಭಾಗ-2' ಸಿನಿಮಾ ಅಲ್ಲ, ಬದಲಿಗೆ ಈಗಾಗಲೇ ಸೂಪರ್ ಹಿಟ್ ಆಗಿರುವ 'ಧುರಂಧರ್ ಭಾಗ-1' ರ ಅನ್‌ಸೆನ್ಸಾರ್ಡ್ ಮತ್ತು ಅನ್‌ಕಟ್ ವರ್ಷನ್. ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ಸೆನ್ಸಾರ್ ಮಂಡಳಿಯಿಂದ ಕತ್ತರಿ ಬಿದ್ದಿದ್ದ ಹಲವು ಆಕ್ಷನ್ ಸೀನ್‌ಗಳು ಮತ್ತು ಡೈಲಾಗ್‌ಗಳನ್ನು ಒಳಗೊಂಡ 'ರಾ ಆಂಡ್ ಅನ್‌ದೇಖಾ' ವರ್ಷನ್ ಇದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸೆನ್ಸಾರ್ ಮಂಡಳಿ ವಿರುದ್ಧ ನೆಟ್ಟಿಗರ ಆಕ್ರೋಶ
ಗೊಂದಲ ಬಗೆಹರಿದ ಬೆನ್ನಲ್ಲೇ ಅಭಿಮಾನಿಗಳು ಭಾರತೀಯ ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿದೇಶಗಳಲ್ಲಿ ಈಗಾಗಲೇ ಈ ಸಿನಿಮಾದ ಅನ್‌ಕಟ್ ವರ್ಷನ್ ಸ್ಟ್ರೀಮಿಂಗ್ ಆಗುತ್ತಿದ್ದು, ಭಾರತೀಯ ಪ್ರೇಕ್ಷಕರಿಗೆ ಮಾತ್ರ ಸೆನ್ಸಾರ್ ಮಾಡಿದ ಚಿತ್ರವನ್ನು ತೋರಿಸಲಾಗಿತ್ತು. "ಭಾರತೀಯರಿಗಾಗಿಯೇ ಮಾಡಿದ ಸಿನಿಮಾವನ್ನು ಭಾರತೀಯರಿಗೆ ಸೆನ್ಸಾರ್ ಮಾಡಿ ತೋರಿಸಲಾಗುತ್ತದೆ, ಆದರೆ ಇಡೀ ಜಗತ್ತು ಇದನ್ನು 'ರಾ' ಆಗಿ ನೋಡುತ್ತದೆ" ಎಂದು ನೆಟ್ಟಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನೇ ಆದರೂ, ಕನ್ಫ್ಯೂಷನ್ ಮಧ್ಯೆಯೂ ಮೇ 22 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಅಕ್ಷಯ್ ಖನ್ನಾ ಅವರ ಅಸಲಿ ಡೈಲಾಗ್‌ಗಳು ಹಾಗೂ ರಣವೀರ್ ಸಿಂಗ್ ಅವರ ರಗಡ್ ಆಕ್ಷನ್ ಸೀನ್‌ಗಳನ್ನು ಕತ್ತರಿ ಇಲ್ಲದೆ ನೋಡಬಹುದು ಎಂದು ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

