
ಧುರಂಧರ್ 3
ಧುರಂಧರ್ 3 ಶೀಘ್ರದಲ್ಲೇ? ರಣವೀರ್ ಸಿಂಗ್ ಚಿತ್ರದ ಬಗ್ಗೆ ಜ್ಯೋತಿ ದೇಶಪಾಂಡೆ ಸುಳಿವು
ಆದಿತ್ಯ ಧರ್ ನಿರ್ದೇಶನದ ಧುರಂಧರ್ 3 ಚಿತ್ರದ ಬಗ್ಗೆ ಜ್ಯೋತಿ ದೇಶಪಾಂಡೆ ದೊಡ್ಡ ಸುಳಿವು ನೀಡಿದ್ದಾರೆ. ರಣವೀರ್ ಸಿಂಗ್ ಅಭಿಮಾನಿಗಳಿಗೆ ಈ ವರ್ಷದ ಅಂತ್ಯಕ್ಕೆ ಕಾದಿದೆ ಒಂದು ಭರ್ಜರಿ ಸರ್ ಪ್ರೈಸ್ ಸುದ್ದಿ.
ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರು ಇತ್ತೀಚೆಗೆ 'ಧುರಂಧರ್' ಚಿತ್ರದ ಮುಂದಿನ ಭಾಗದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರದ ಮೊದಲ ಮತ್ತು ಎರಡನೇ ಭಾಗಗಳು 2025 ಮತ್ತು 2026ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿವೆ. ರಣವೀರ್ ಸಿಂಗ್ ನಟನೆಯ ಈ ಸ್ಪೈ-ಆಕ್ಷನ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಅಭೂತಪೂರ್ವ ರೆಸ್ಪಾನ್ಸ್ ಬೆನ್ನಲ್ಲೇ ಮೂರನೇ ಭಾಗದ ಬಗ್ಗೆ ಚರ್ಚೆಗಳು ಶುರುವಾಗಿವೆ.
ಈ ಬಗ್ಗೆ ಮಾತನಾಡಿದ ಜ್ಯೋತಿ ದೇಶಪಾಂಡೆ ಅವರು ಧುರಂಧರ್ ಸರಣಿಯ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಪ್ರೇಕ್ಷಕರಿಗೆ ದೊಡ್ಡ ಸರ್‌ಪ್ರೈಸ್ ನೀಡಲು ತಂಡ ಯೋಜಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಆದಿತ್ಯ ಧರ್ ಅವರು ಈ ಚಿತ್ರದ ವಿಷಯದಲ್ಲಿ ಇನ್ನೂ ಹೆಚ್ಚಿನದನ್ನು ನೀಡಲಿದ್ದಾರೆ ಎನ್ನುವ ಮೂಲಕ ಧುರಂಧರ್ 3 ಬರುವ ಸಾಧ್ಯತೆಗಳನ್ನು ಅವರು ಖಚಿತಪಡಿಸಿದ್ದಾರೆ. ಈ ಹೇಳಿಕೆಯು ಅಭಿಮಾನಿಗಳಲ್ಲಿ ಈಗ ಹೊಸ ಸಂಚಲನ ಮೂಡಿಸಿದೆ.
ನಟ ರಾಕೇಶ್ ಬೇಡಿ ಅವರು ಈ ಹಿಂದೆ ಮೂರನೇ ಭಾಗದ ಬಗ್ಗೆ ಕೇಳಿಬಂದ ಸುದ್ದಿಗಳು ಕೇವಲ ವದಂತಿ ಎಂದು ಹೇಳಿದ್ದರೂ ಸಹ ಈಗಿನ ಬೆಳವಣಿಗೆಗಳು ಚಿತ್ರದ ಸೀಕ್ವೆಲ್ ಕೆಲಸಗಳು ತೆರೆಯ ಹಿಂದೆ ನಡೆಯುತ್ತಿರುವುದನ್ನು ಸೂಚಿಸುತ್ತಿವೆ. ಚಿತ್ರದ ಮೊದಲ ಎರಡು ಭಾಗಗಳಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಅಕ್ಷಯ್ ಖನ್ನಾ ಅಂತಹ ದೊಡ್ಡ ತಾರಾಗಣವಿತ್ತು. ಇದೀಗ ಮುಂದಿನ ಭಾಗದ ಅಧಿಕೃತ ಘೋಷಣೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

