
ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ವಿಶ್ವದಾದ್ಯಂತ 1795 ಕೋಟಿ ರೂ. ಗಳಿಸಿದೆ.
ಧುರಂಧರ್ 2' | ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,795 ಕೋಟಿ ರೂ. ಉಡೀಸ್
ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿರುವ ಈ ಚಿತ್ರವು ಇದೀಗ ವಿಶ್ವದಾದ್ಯಂತ ಒಟ್ಟು 1,795 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿರುವ ಧುರಂದರ್ ಸಿನಿಮಾ ವಿಶ್ವದಾದ್ಯಂತ ಒಟ್ಟು 1,795 ಕೋಟಿ ರೂಪಾಯಿಗಳ ಭರ್ಜರಿ ಗಳಿಕೆ ಮಾಡಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಜಯಭೇರಿಯನ್ನು ಮುಂದುವರಿಸಿದ್ದು, ಬಿಡುಗಡೆಯಾದ 54ನೇ ದಿನವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 19 ರಂದು ತೆರೆಕಂಡಿದ್ದ ಈ ಚಿತ್ರವು ಆರಂಭದಿಂದಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ 1,800 ಕೋಟಿ ರೂಪಾಯಿಗಳ ಬೃಹತ್ ಮೊತ್ತದತ್ತ ದಾಪುಗಾಲು ಹಾಕುತ್ತಿದೆ.
ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಡ್ರಾಮಾ ಎಂಟನೇ ವಾರಕ್ಕೆ ಕಾಲಿಟ್ಟಿದ್ದರೂ ಕಲೆಕ್ಷನ್ ವಿಚಾರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಲಾಭ ಗಳಿಸಿದೆ. ಸದ್ಯ ಈ ಚಿತ್ರವು ಒಟಿಟಿ ವೇದಿಕೆಗೆ ಬರಲು ಸಿದ್ಧವಾಗುತ್ತಿದ್ದು, ಮೇ 14 ರಂದು ಡಿಜಿಟಲ್ ಪರದೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟಿಟಿ ಬಿಡುಗಡೆಯ ಸುಳಿವು ಸಿಕ್ಕ ಬೆನ್ನಲ್ಲೇ ಈ ಬೃಹತ್ ಮೊತ್ತದ ಗಳಿಕೆ ಮಾಡಿರುವುದು ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿದೆ.
ಒಟ್ಟಾರೆಯಾಗಿ ಭಾರತದಲ್ಲಿ 1,143 ಕೋಟಿ ರೂಪಾಯಿಗಳ ನಿವ್ವಳ ಗಳಿಕೆ ಮಾಡಿರುವ ಈ ಸಿನಿಮಾ, ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ನಟನೆ ಮತ್ತು ಮೇಕಿಂಗ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ದಾಖಲೆಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
'ಧುರಂಧರ್ 2' ಕಥೆ ಏನು?
ಸಿನಿಮಾದ ಮೊದಲ ಭಾಗದಲ್ಲಿ ಭೂಗತ ಲೋಕದ ನಂಟನ್ನು ಬೆಳೆಸಿಕೊಂಡಿದ್ದ ಹಮ್ಜಾ, ಈ ಎರಡನೇ ಭಾಗದಲ್ಲಿ ಕರಾಚಿಯ ಅಪಾಯಕಾರಿ ಕ್ರಿಮಿನಲ್ ಗುಂಪುಗಳೊಳಗೆ ಮತ್ತಷ್ಟು ಆಳವಾಗಿ ನುಗ್ಗುತ್ತಾನೆ. ಭಾರತದ ಮೇಲೆ ನಡೆದ 26/11 ಮುಂಬೈ ದಾಳಿ ಸೇರಿದಂತೆ ಹಲವು ಭಯೋತ್ಪಾದನಾ ಕೃತ್ಯಗಳ ಹಿಂದೆ ಇರುವ ಶಕ್ತಿಗಳನ್ನು ಹತ್ತಿಕ್ಕುವುದು ಮತ್ತು ಅದರ ಮಾಸ್ಟರ್ ಮೈಂಡ್ ಆಗಿರುವ 'ಬಡೆ ಸಾಹಬ್' ಎಂಬುವವನ ಪತ್ತೆ ಹಚ್ಚುವುದು ಇವನ ಪ್ರಮುಖ ಉದ್ದೇಶವಾಗಿರುತ್ತದೆ. ತನ್ನ ಪ್ರಾಣದ ಹಂಗು ತೊರೆದು ಶತ್ರು ರಾಷ್ಟ್ರದ ನೆಲದಲ್ಲಿ ಏಕಾಂಗಿಯಾಗಿ ಹೋರಾಡುವ ಹಮ್ಜಾ, ಅಲ್ಲಿನ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್ (ಅರ್ಜುನ್ ರಾಂಪಾಲ್) ಮತ್ತು ಸ್ಥಳೀಯ ಗ್ಯಾಂಗ್‌ಸ್ಟರ್‌ಗಳ ಚಕ್ರವ್ಯೂಹವನ್ನು ಹೇಗೆ ಭೇದಿಸುತ್ತಾನೆ ಎಂಬುದು ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಸಾಗುತ್ತದೆ.

