
ಹಿರಿಯ ನಟ ಧರ್ಮೇಂದ್ರಗೆ ಮರಣೋತ್ತರ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಇಂದು ಪ್ರಶಸ್ತಿ ಸ್ವೀಕರಿಸಲಿರುವ ಖ್ಯಾತ ನಟಿ ಹೇಮಾ ಮಾಲಿನಿ
ದಿವಂಗತ ನಟ ಧರ್ಮೇಂದ್ರಗೆ ‘ಪದ್ಮವಿಭೂಷಣ’: ಪ್ರಶಸ್ತಿ ಸ್ವೀಕರಿಸಲಿರುವ ಪತ್ನಿ ಹೇಮಾ ಮಾಲಿನಿ
ದಿವಂಗತ ನಟ ಧರ್ಮೇಂದ್ರ ಅವರಿಗೆ ಘೋಷಿಸಲಾದ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮವಿಭೂಷಣ’ವನ್ನು ಪತ್ನಿ ಹೇಮಾ ಮಾಲಿನಿ ಇಂದು ದೆಹಲಿಯಲ್ಲಿ ಸ್ವೀಕರಿಸಲಿದ್ದಾರೆ.
ಭಾರತೀಯ ಚಿತ್ರರಂಗದ ದೃವತಾರೆ, ದಿವಂಗತ ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮವಿಭೂಷಣ’ವನ್ನು ಅವರ ಪತ್ನಿ, ಖ್ಯಾತ ನಟಿ ಹೇಮಾ ಮಾಲಿನಿ ಅವರು ಸೋಮವಾರ ನವದೆಹಲಿಯಲ್ಲಿ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆಯಲಿರುವ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಗೌರವವನ್ನು ಪ್ರದಾನ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಧರ್ಮೇಂದ್ರ ಅವರು ಇಹಲೋಕ ತ್ಯಜಿಸಿದ ಬಳಿಕ, ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಆಗಮಿಸಿರುವ ಹೇಮಾ ಮಾಲಿನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಇಡೀ ಕುಟುಂಬಕ್ಕೆ ಅತ್ಯಂತ ಭಾವುಕ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ. ತಮ್ಮೊಂದಿಗೆ ಮಗಳು ಅಹಾನಾ ಇದ್ದು, ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಸೇರಿದಂತೆ ಇಡೀ ಕುಟುಂಬ ಈ ಗೌರವದಿಂದ ಅತ್ಯಂತ ಸಂತಸಗೊಂಡಿದೆ ಎಂದು ಅವರು ಹಂಚಿಕೊಂಡಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಅವರ ಅಪಾರ ಕೊಡುಗೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ನಡೆಯಲಿರುವ ಇದೇ ಸಮಾರಂಭದಲ್ಲಿ ಮಲಯಾಳಂ ಚಿತ್ರರಂಗದ ದಿಗ್ಗಜ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಕಲಾ ಜಗತ್ತಿನ ಪ್ರಮುಖ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.

