
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Deepika Padukone| ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ ದಂಪತಿ
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗಳು ದುವಾ ಶೀಘ್ರದಲ್ಲೇ ದೊಡ್ಡಕ್ಕನಾಗಲಿದ್ದಾಳೆ ಎಂದು ನಟಿ ಮುದ್ದಾದ ಫೋಟೋ ಮೂಲಕ ಶುಭ ಸುದ್ದಿ ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮೊದಲ ಮಗಳು 'ದುವಾ' ಬಳಿಕ ದೀಪಿಕಾ ಎರಡನೇ ಬಾರಿಗೆ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ದೀಪಿಕಾ ಮತ್ತು ಆಲಿಯಾ ಭಟ್ ಅವರ ಎರಡನೇ ಗರ್ಭಧಾರಣೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ದೀಪಿಕಾ ಭಾನುವಾರ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತಿ ರಣವೀರ್ ಸಿಂಗ್ ಅವರೊಂದಿಗೆ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ನಟಿ, ಅದರಲ್ಲಿ ತಾವು ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಸ್ಟ್ರಿಪ್ ಹಿಡಿದುಕೊಂಡಿರುವುದನ್ನು ತೋರಿಸಿದ್ದಾರೆ. ವಿಶೇಷವೆಂದರೆ, ಈ ಫೋಟೋದಲ್ಲಿ ಮಗಳು ದುವಾ ಕೂಡ ಕಾಣಿಸಿಕೊಂಡಿದ್ದಾಳೆ. ಈ ಪೋಸ್ಟ್‌ಗೆ ದೀಪಿಕಾ ಯಾವುದೇ ಸುದೀರ್ಘ ಶೀರ್ಷಿಕೆ ನೀಡದೆ, ಕೇವಲ 'ದುಷ್ಟ ಕಣ್ಣು' ಬೀಳದಿರಲಿ ಎಂಬ ಸಂಕೇತದ ಎಮೋಜಿಯನ್ನು ಮಾತ್ರ ಬಳಸಿದ್ದಾರೆ.
ದೀಪಿಕಾ ಅವರ ಈ ಹಠಾತ್ ಘೋಷಣೆ ಬಾಲಿವುಡ್ ಸೇರಿದಂತೆ ಅಭಿಮಾನಿ ಲೋಕದಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದೆ. ಈಗಾಗಲೇ ಸಾವಿರಾರು ಲೈಕ್ಸ್ ಪಡೆದಿರುವ ಈ ಪೋಸ್ಟ್‌ಗೆ ಪರಿಣಿತಿ ಚೋಪ್ರಾ, ಸಮಂತಾ ರುತ್ ಪ್ರಭು ಸೇರಿದಂತೆ ಅನೇಕ ತಾರೆಯರು ಶುಭ ಹಾರೈಸುತ್ತಿದ್ದಾರೆ. 2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, 2024 ರಲ್ಲಿ ಮಗಳು ದುವಾಳನ್ನು ಸ್ವಾಗತಿಸಿದ್ದರು. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ವದಂತಿಗೆ ಕಾರಣವೇನು?
ಇತ್ತೀಚೆಗೆ ನಡೆದ ಅಂಬಾನಿ ಕುಟುಂಬದ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್‌ನ ಬಹುತೇಕ ಎಲ್ಲಾ ಗಣ್ಯರು ಹಾಜರಿದ್ದರು. ಆದರೆ, ದೀಪಿಕಾ ಪಡುಕೋಣೆ ಅವರ ಗೈರುಹಾಜರಿ ಅಭಿಮಾನಿಗಳಲ್ಲಿ ಹಲವು ಸಂಶಯಗಳನ್ನು ಮೂಡಿಸಿತ್ತು. ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದೀಪಿಕಾ ಅವರ ಇತ್ತೀಚಿನ ಫೋಟೋಗಳನ್ನು ಹಳೆಯ ಫೋಟೋಗಳೊಂದಿಗೆ ಹೋಲಿಸಿ ನೋಡುತ್ತಿದ್ದರು. ಕೆಲವರು "ದೀಪಿಕಾ ಎರಡನೇ ಬಾರಿ ಗರ್ಭಿಣಿಯಾಗಿರುವುದು ಖಚಿತ" ಎನ್ನುತ್ತಿದ್ದರೆ, ಇನ್ನು ಕೆಲವರು "ಅಧಿಕೃತ ಮಾಹಿತಿ ಬರುವವರೆಗೆ ಕಾದು ನೋಡೋಣ" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೀಗ ದೀಪಿಕಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಅವರೊಂದಿಗೆ ನಟಿಸುತ್ತಿರುವ 'ಕಿಂಗ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಜೊತೆಗೆ ಯಶ್ ರಾಜ್ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ 'ಪಠಾಣ್ 2' ಮತ್ತು ಆಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ 2' ಸಿನಿಮಾಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲೀ ಅವರ ಹೊಸ ಪ್ರಾಜೆಕ್ಟ್‌ನಲ್ಲಿಯೂ ದೀಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದೆಡೆ ರಣವೀರ್ ಸಿಂಗ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಾವಿರ ಕೋಟಿ ಗಳಿಕೆಯ ದಾಖಲೆ ಬರೆದಿರುವ 'ಧುರಂಧರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಅವರು 'ಡಾನ್ 3' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಇದಲ್ಲದೆ ಹನ್ಸಲ್ ಮೆಹ್ತಾ ನಿರ್ಮಾಣದ 300 ಕೋಟಿ ವೆಚ್ಚದ 'ಪ್ರಳಯ' ಎಂಬ ವಿಭಿನ್ನ ಆಕ್ಷನ್ ಸಿನಿಮಾದಲ್ಲಿ ರಣವೀರ್ ನಟಿಸುತ್ತಿದ್ದು, ಪ್ರಶಾಂತ್ ವರ್ಮಾ ನಿರ್ದೇಶನದ ಫ್ಯಾಂಟಸಿ ಚಿತ್ರ 'ರಾಕ್ಷಸ್' ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.

