
ದೀಪಿಕಾ ಪಡುಕೋಣೆ
Deepika Padukone| 'ಕಿಂಗ್' ಶೂಟಿಂಗ್ ಬೆನ್ನಲ್ಲೇ ಹೊಸ ಜಾಹೀರಾತು ಚಿತ್ರೀಕರಣದಲ್ಲಿ ದೀಪಿಕಾ ಪಡುಕೋಣೆ
'ಕಿಂಗ್' ಚಿತ್ರದ ಶೂಟಿಂಗ್ ಮುಗಿಸಿದ ದೀಪಿಕಾ ಪಡುಕೋಣೆ, ಇದೀಗ ಬೆಂಗಳೂರಿನಲ್ಲಿ ಹೊಸ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಹಾಗೂ ಶೀಘ್ರದಲ್ಲೇ ಮತ್ತೆ ತಾಯಿಯಾಗಲಿರುವ ದೀಪಿಕಾ ಪಡುಕೋಣೆ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯದ 'ಕಿಂಗ್' ಚಿತ್ರದ ಶೂಟಿಂಗ್ ಮುಗಿಸಿರುವ ನಟಿ, ಇದೀಗ ಬೆಂಗಳೂರಿನಲ್ಲಿ ಹೊಸ ಜಾಹೀರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಐಷಾರಾಮಿ ಹೋಟೆಲ್ ಬ್ರ್ಯಾಂಡ್ ಒಂದರ ರಾಯಭಾರಿಯಾಗಿರುವ ದೀಪಿಕಾ, ನೀಲಿ ಬಣ್ಣದ ಮೊನೊಕ್ರೋಮ್ ಪ್ಯಾಂಟ್‌ಸೂಟ್ ಧರಿಸಿ ಶೂಟಿಂಗ್ ಸೆಟ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ 'ಕಿಂಗ್' ಚಿತ್ರದ ಶೂಟಿಂಗ್ ಮುಗಿಸಿ ಮುಂಬೈಗೆ ಮರಳುವ ಮುನ್ನ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಈ ಶೂಟಿಂಗ್‌ಗಾಗಿ ಬಿಡುವು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಶಾರುಖ್ ಖಾನ್ ಜೊತೆಗಿನ ಹಾಡಿನ ಚಿತ್ರೀಕರಣದ ವೇಳೆ ದೀಪಿಕಾ ಪಡುಕೋಣೆ ಅವರ ಪ್ರೆಗ್ನೆನ್ಸಿ ಬಂಪ್ ಕಾಣಿಸಿಕೊಂಡಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಅವರು ನಗುತ್ತಾ ಓಡಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಈ ಹಿಂದೆಯೇ ವೈರಲ್ ಆಗಿದ್ದವು.
ಚಿತ್ರೀಕರಣದ ಸಮಯದಲ್ಲಿ ಸಹನಟ ಶಾರುಖ್ ಖಾನ್ ಅವರು ದೀಪಿಕಾ ಅವರಿಗೆ ಮೆಟ್ಟಿಲುಗಳನ್ನು ಹತ್ತಲು ಹಾಗೂ ಕಡಲತೀರದಲ್ಲಿ ನಡೆಯಲು ಕೈ ಹಿಡಿದು ಸಹಾಯ ಮಾಡುತ್ತಿದ್ದ ದೃಶ್ಯಗಳು ಕೂಡ ಅಭಿಮಾನಿಗಳ ಗಮನ ಸೆಳೆದಿದ್ದವು. ಈ ಯಶಸ್ವಿ ಆನ್-ಸ್ಕ್ರೀನ್ ಜೋಡಿ ಇದೀಗ ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಕಿಂಗ್' ಚಿತ್ರದ ಮೂಲಕ ಮತ್ತೊಮ್ಮೆ ಒಂದಾಗುತ್ತಿದೆ.
ಇದಲ್ಲದೆ, ನಿರ್ದೇಶಕ ಅಟ್ಲಿ ಅವರ ಮುಂದಿನ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಚಿತ್ರವಾದ 'ರಾಕಾ' ನಲ್ಲೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿರುವ ಈ ಆ್ಯಕ್ಷನ್ ಚಿತ್ರಕ್ಕಾಗಿ ದೀಪಿಕಾ ಸುಮಾರು 100 ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ಸದ್ಯ 50 ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ದೀಪಿಕಾ ಅವರ ಗರ್ಭಧಾರಣೆಯ ಕಾರಣದಿಂದಾಗಿ ಚಿತ್ರದ ಪ್ರಮುಖ ಆ್ಯಕ್ಷನ್ ಸನ್ನಿವೇಶಗಳಿಗೆ ಬಾಡಿ ಡಬಲ್ (ಡ್ಯೂಪ್) ಬಳಸಲು ಚಿತ್ರತಂಡ ಯೋಜಿಸಿದೆ ಎಂದು ವರದಿಯಾಗಿದೆ.

