
ದರ್ಶನ್ ಅವರ ಹಳೆಯ ಭಾಷಣದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ನನ್ನ ಸೆಲೆಬ್ರಿಟಿಗಳೇ ನನ್ನ ಆಸ್ತಿಎಂದಿದ್ದ ದರ್ಶನ್: ಹಳೇ ಲೈವ್ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿ 1 ವರ್ಷ. ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ವಿಡಿಯೋ ವೈರಲ್ ಬೆನ್ನಲ್ಲೇ 'ಕಲಾಸಿಪಾಳ್ಯ' ಚಿತ್ರ ಮರು ಬಿಡುಗಡೆಗೆ ಸಿದ್ಧತೆ ಜೋರಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಇಂದಿಗೆ ಭರ್ತಿ ಒಂದು ವರ್ಷ ಕಳೆದಿದೆ. ಆದರೂ ಚಿತ್ರರಂಗದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅವರ ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರ ಹಳೆಯ ಭಾಷಣದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿದೆ.
ವೈರಲ್ ಆಗುತ್ತಿರುವ ಈ ಹಳೇ ವಿಡಿಯೋದಲ್ಲಿ ದರ್ಶನ್ ಅವರು ತಮ್ಮ ನೆಚ್ಚಿನ 'ಸೆಲೆಬ್ರಿಟಿಗಳ' (ಅಭಿಮಾನಿಗಳ) ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. "ನಿಮ್ಮ ಪ್ರೀತಿಗೆ ನಾನು ಸದಾ ಋಣಿ" ಎಂದು ಅವರು ಹೇಳಿರುವ ಹಳೆಯ ಮಾತುಗಳು ಈಗಿನ ಪರಿಸ್ಥಿತಿಗೆ ತಳುಕು ಹಾಕಿಕೊಂಡು ಫ್ಯಾನ್ಸ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿವೆ. ಜೈಲಿನಲ್ಲಿದ್ದರೂ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹೊರಗಿರುವ ಫ್ಯಾನ್ಸ್ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.
ಇದೇ ಹೊತ್ತಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ದರ್ಶನ್ ಅವರ ಕೆರಿಯರ್‌ನ ಸಾರ್ವಕಾಲಿಕ ಸೂಪರ್ ಹಿಟ್ ಆಕ್ಷನ್ ಸಿನಿಮಾ 'ಕಲಾಸಿಪಾಳ್ಯ' ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಗೆ ರೆಡಿಯಾಗುತ್ತಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ನೆಚ್ಚಿನ ದಾಸನನ್ನು ಬೆಳ್ಳಿ ಪರದೆಯ ಮೇಲೆ ಮತ್ತೆ ನೋಡಲು ಅಭಿಮಾನಿ ಬಳಗ ಈಗಿನಿಂದಲೇ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹಿಂದೆ 2011ರಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದ ಸಮಯದಲ್ಲೇ ಬಿಡುಗಡೆಯಾಗಿದ್ದ 'ಸಾರಥಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡು, ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿತ್ತು. ಈಗ ಅದೇ ಇತಿಹಾಸ ಮರುಕಳಿಸಲಿದೆಯೇ ಮತ್ತು ಹೊಸದಾಗಿ ತೆರೆಗೆ ಬರಲಿರುವ 'ಕಲಾಸಿಪಾಳ್ಯ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಳೆ ದಾಖಲೆಗಳನ್ನು ಧೂಳೀಪಟ ಮಾಡಿ ಹೊಸ ಹಿಸ್ಟರಿ ಕ್ರಿಯೇಟ್ ಮಾಡುತ್ತಾ ಎಂಬುದನ್ನು ನೋಡಬೇಕಾಗಿದೆ.

