ಪುಷ್ಪ 2 ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಕೋರ್ಟ್ ಸಮನ್ಸ್
x

'ಪುಷ್ಪ 2' ಪ್ರೀಮಿಯರ್ ಶೋ ಕಾಲ್ತುಳಿತ ಪ್ರಕರಣದಲ್ಲಿ ನಾಂಪಲ್ಲಿ ನ್ಯಾಯಾಲಯದಿಂದ ಸಮನ್ಸ್ ಪಡೆದಿರುವ ನಟ ಅಲ್ಲು ಅರ್ಜುನ್.

ಪುಷ್ಪ 2 ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್‌ಗೆ ಕೋರ್ಟ್ ಸಮನ್ಸ್

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ ಪುಷ್ಪ 2 ಕಾಲ್ತುಳಿತ ಪ್ರಕರಣದಲ್ಲಿ ನಾಂಪಲ್ಲಿ ಕೋರ್ಟ್‌ ನಟ ಅಲ್ಲು ಅರ್ಜುನ್‌ (A11) ಸೇರಿದಂತೆ 20 ಆರೋಪಿಗಳಿಗೆ ಸೋಮವಾರ ಹಾಜರಾಗಲು ಸಮನ್ಸ್‌ ಜಾರಿ ಮಾಡಿದೆ.


Click the Play button to hear this message in audio format

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ನಾಂಪಲ್ಲಿ ನ್ಯಾಯಾಲಯವು ಬಿಗ್ ಶಾಕ್ ನೀಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್, ಅಲ್ಲು ಅರ್ಜುನ್ ಸೇರಿದಂತೆ ಇತರ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಮುಂಬರುವ ಸೋಮವಾರದಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ.

'ಪುಷ್ಪ 2' ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್ ಬಳಿ ನಡೆದ ಈ ದುರದೃಷ್ಟಕರ ಕಾಲ್ತುಳಿತದ ಘಟನೆ ಭಾರೀ ಸಂಚಲನ ಮೂಡಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ (ದೋಷಾರೋಪ ಪಟ್ಟಿ) ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿ (A11) ಹೆಸರಿಸಿದ್ದಾರೆ.

ದೀರ್ಘಾವಧಿಯ ತನಿಖೆಯ ನಂತರ ಪೊಲೀಸರು ಅಲ್ಲು ಅರ್ಜುನ್ ಸೇರಿದಂತೆ ಒಟ್ಟು 23 ಜನರನ್ನು ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರಲ್ಲಿ ಸಂಧ್ಯಾ ಥಿಯೇಟರ್‌ನ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿದೆ. ಈ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ನಾಂಪಲ್ಲಿ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಚುರುಕುಗೊಳಿಸಿದ್ದು ಅಲ್ಲು ಅರ್ಜುನ್ ಹಾಗೂ ಇತರ 19 ಆರೋಪಿಗಳಿಗೆ ಸಮನ್ಸ್ ನೀಡಿದೆ. ಅವರೆಲ್ಲರೂ ಸೋಮವಾರ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ ಎಂದು ತಿಳಿಸಿದೆ.

ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ದಿನದಂದು ಅಭಿಮಾನಿಗಳು ಮತ್ತು ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ ಅಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಕಾಲ್ತುಳಿತ ಸಂಭವಿಸಿ ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ದರು ಹಾಗೂ ಹಲವರು ಗಾಯಗೊಂಡಿದ್ದರು. ಈ ಇಡೀ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಪೊಲೀಸರು ದಾಖಲಿಸಿದ್ದ ಪ್ರಕರಣ ಈಗ ನ್ಯಾಯಾಲಯದ ವಿಚಾರಣೆಯ ಹಂತಕ್ಕೆ ತಲುಪಿದೆ. ನಾಂಪಲ್ಲಿ ಕೋರ್ಟ್ ನೀಡಿರುವ ಈ ತಾಜಾ ಸಮನ್ಸ್ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಸೋಮವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಾರಾ ಇಲ್ಲವೇ ಎಂಬುದು ಈಗ ತೀವ್ರ ಕುತೂಹಲ ಮೂಡಿಸಿದೆ.

Read More
Next Story