
ಮನೆಯ ಕೆಲಸಗಳ ಕುರಿತಾದ ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ನಟಿ ಪ್ರಿಯಾಂಕಾ ಚೋಪ್ರಾ
ಅಡುಗೆ, ಕ್ಲೀನಿಂಗ್ ಮಹಿಳೆಯರ ಕೆಲಸವಲ್ಲ: ಪ್ರಿಯಾಂಕಾ ಚೋಪ್ರಾ ಚಾಟಿ
ಮನೆಯ ಕೆಲಸಗಳ ಕುರಿತಾದ ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ನಟಿ ಪ್ರಿಯಾಂಕಾ ಚೋಪ್ರಾ, ಅಡುಗೆ ಹಾಗೂ ಸ್ವಚ್ಛತೆ ಕೇವಲ ಮಹಿಳೆಯರ ಜವಾಬ್ದಾರಿಯಲ್ಲ, ಅದು ಎಲ್ಲರ ಮೂಲಭೂತ ಕರ್ತವ್ಯ ಎಂದಿದ್ದಾರೆ.
ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಇತ್ತೀಚೆಗೆ ಮನೆಯಲ್ಲಿನ ಲಿಂಗ ತಾರತಮ್ಯ ವಿರುದ್ಧ ತೀವ್ರವಾಗಿ ಧ್ವನಿ ಎತ್ತಿದ್ದಾರೆ. ಮನೆಯ ದಿನನಿತ್ಯದ ಕೆಲಸಗಳು ಕೇವಲ ಮಹಿಳೆಯರ ಜವಾಬ್ದಾರಿ ಮಾತ್ರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಖ್ಯಾತ 'ಕಾನ್ ಲಯನ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ, ಅಡುಗೆ ಮಾಡುವುದು, ಮನೆ ಕ್ಲೀನ್ ಮಾಡುವುದು ಮತ್ತು ದಿನನಿತ್ಯದ ಗೃಹಕೃತ್ಯಗಳನ್ನು ನಿರ್ವಹಿಸುವುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತ ಎಂಬ ಸಾಂಪ್ರದಾಯಿಕ ಮನಸ್ಥಿತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮನೆಗೆಲಸ ಮತ್ತು ಸ್ವಚ್ಛತೆ ಎನ್ನುವುದು ಕೇವಲ ಮಹಿಳೆಯರ ಕೆಲಸವಲ್ಲ, ಬದಲಿಗೆ ಪ್ರತಿಯೊಬ್ಬ ವಯಸ್ಕ ವ್ಯಕ್ತಿಯೂ ಕಲಿಯಬೇಕಾದ ಕನಿಷ್ಠ ಮೂಲಭೂತ ಜೀವನ ಕೌಶಲಗಳಾಗಿವೆ ಎಂದು ಅವರು ಪ್ರತಿಪಾದಿಸಿದರು. ಇದೇ ವೇಳೆ ಅವರು, "ಲಿಂಗ ತಾರತಮ್ಯವನ್ನು ನಿಮ್ಮ ಸೋಮಾರಿತನಕ್ಕೆ ಹೋಲಿಸಿ ಗೊಂದಲ ಸೃಷ್ಟಿಸಬೇಡಿ" ಎಂದು ನೇರವಾಗಿಯೇ ತಿರುಗೇಟು ನೀಡಿದರು. ಪ್ರಿಯಾಂಕಾ ಚೋಪ್ರಾ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಗೃಹಕೃತ್ಯಗಳಲ್ಲಿನ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಿರುವ ಅನೇಕರಿಂದ ವ್ಯಾಪಕ ಬೆಂಬಲ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ಸಂದರ್ಭದಲ್ಲಿ ಮನರಂಜನಾ ಕ್ಷೇತ್ರದ ಬದಲಾಗುತ್ತಿರುವ ಚಿತ್ರಣದ ಬಗ್ಗೆ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನವು ಚಿತ್ರರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಮತ್ತು ಸ್ವತಂತ್ರ ಕಂಟೆಂಟ್ ಕ್ರಿಯೇಟರ್‌ಗಳಿಗೆ ದೊಡ್ಡ ವೇದಿಕೆ ಕಲ್ಪಿಸಿದೆ ಎಂದು ಶ್ಲಾಘಿಸಿದರು.
ತಮ್ಮ ಮುಂಬರುವ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡ ಪ್ರಿಯಾಂಕಾ, ಹಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜೋಲಿ ಅವರೊಂದಿಗೆ ಹೊಸದೊಂದು ವಿಶೇಷ ಯೋಜನೆಯಲ್ಲಿ ಕೈಜೋಡಿಸುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಇದರೊಂದಿಗೆ ನಟ ಒರ್ಲ್ಯಾಂಡೊ ಬ್ಲೂಮ್ ಜೊತೆಗಿನ ಹೊಸ ಚಿತ್ರ ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದಲ್ಲಿ, ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದಲ್ಲೂ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

