ಚೆಕ್ ಬೌನ್ಸ್ ಪ್ರಕರಣ| ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್
x

ಪ್ರಸಿದ್ಧ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಚೆಕ್ ಬೌನ್ಸ್ ಪ್ರಕರಣ| ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ 3 ತಿಂಗಳ ಜೈಲು ಹಾಗೂ ಕೋಟಿಗಟ್ಟಲೆ ದಂಡ ವಿಧಿಸಿದ್ದು, ಮೇಲ್ಮನವಿಗೆ 2 ತಿಂಗಳ ಕಾಲಾವಕಾಶ ನೀಡಿದೆ.


Click the Play button to hear this message in audio format

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿಂತೆ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನಟನ ವಿರುದ್ಧ ದಾಖಲಿಸಿದ್ದ ಒಟ್ಟು ಏಳು ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ನ್ಯಾಯಪೀಠವು ಈ ತೀರ್ಪನ್ನು ನೀಡಿದೆ.

ಹಣ ಪಾವತಿಗೆ ತಪ್ಪಿದ ನಟ

ನ್ಯಾಯಾಲಯದ ಆದೇಶದ ಪ್ರಕಾರ, ನಟ ರಾಜ್‌ಪಾಲ್ ಯಾದವ್ ತಮಗೆ ನೀಡಲಾಗಿದ್ದ ಸಾಲವನ್ನು ಮರುಪಾವತಿ ಮಾಡಲು ಹಲವು ಬಾರಿ ಭರವಸೆ ನೀಡಿದ್ದರೂ ಅದನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನ್ಯಾಯಾಲಯ ಮತ್ತು ಸಂಧಾನ ಕೇಂದ್ರಗಳ ಮುಂದೆ ನೀಡಿದ ಭರವಸೆಗಳನ್ನು ನಟ ಉಳಿಸಿಕೊಳ್ಳದ ಕಾರಣ, ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಾಲ ತೀರಿಸಲು ಅವರಿಗೆ ಹಲವು ಬಾರಿ ಕಾಲಾವಕಾಶ ನೀಡಲಾಗಿತ್ತಾದರೂ, ಅವರು ಒಪ್ಪಂದದ ಪ್ರಕಾರ ನಡೆದುಕೊಳ್ಳಲಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.

ದಂಡದ ಮೊತ್ತ ಮತ್ತು ಶಿಕ್ಷೆಯ ವಿವರ

ನ್ಯಾಯಾಲಯವು ನಟ ರಾಜ್‌ಪಾಲ್ ಯಾದವ್ ವಿರುದ್ಧದ ಏಳೂ ಪ್ರಕರಣಗಳಲ್ಲಿ ತಲಾ 3 ತಿಂಗಳ ಕಠಿಣವಲ್ಲದ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ. ಶಿಕ್ಷೆಯ ಜೊತೆಗೆ, ಪ್ರತಿ ಪ್ರಕರಣದಲ್ಲೂ ತಲಾ 1.05 ಕೋಟಿ ರೂಪಾಯಿ ದಂಡ ಪಾವತಿಸುವಂತೆ ನಟನಿಗೆ ಆದೇಶಿಸಲಾಗಿದೆ. ಇದೇ ಪ್ರಕರಣದಲ್ಲಿ ಅವರ ಪತ್ನಿ ರಾಧಾ ರಾಜ್‌ಪಾಲ್ ಯಾದವ್ ಅವರಿಗೂ ಪ್ರತಿ ಪ್ರಕರಣಕ್ಕೆ ತಲಾ 5 ಲಕ್ಷ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ.

ಮೇಲ್ಮನವಿಗೆ ಅವಕಾಶ

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಟ ರಾಜ್‌ಪಾಲ್ ಯಾದವ್ ಅವರಿಗೆ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ. ಇದಕ್ಕೂ ಮುನ್ನ, 2024 ರಲ್ಲಿ ಸೆಷನ್ಸ್ ನ್ಯಾಯಾಲಯವು ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆಗ ಹೈಕೋರ್ಟ್ ಆ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಸಂಧಾನಕ್ಕೆ ಅವಕಾಶ ನೀಡಿತ್ತು. ಆದರೆ, ನಂತರದ ದಿನಗಳಲ್ಲಿ ನೀಡಿದ ಭರವಸೆಯಂತೆ ಹಣ ಠೇವಣಿ ಮಾಡದ ಕಾರಣ ಈಗ ಹೈಕೋರ್ಟ್ ಈ ಕಠಿಣ ಕಾನೂನು ಕ್ರಮ ಕೈಗೊಂಡಿದೆ.

Read More
Next Story