
'ಬಿಗ್ ಬಾಸ್ 12' ವಿನ್ನರ್ ಗಿಲ್ಲಿ ನಟ ಅಭಿನಯದ 'ಸರ್ವೇ ನಂಬರ್ 45' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯದ ಹಂತದಲ್ಲಿದೆ.
Gilli Nata| 'ಸರ್ವೇ ನಂಬರ್ 45' ಚಿತ್ರದಲ್ಲಿ ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ
'ಬಿಗ್ ಬಾಸ್ 12' ವಿನ್ನರ್ ಗಿಲ್ಲಿ ನಟ ಅಭಿನಯದ 'ಸರ್ವೇ ನಂಬರ್ 45' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಕ್ತಾಯದ ಹಂತದಲ್ಲಿದೆ.
'ಬಿಗ್ ಬಾಸ್ ಕನ್ನಡ ಸೀಸನ್ 12' ರಿಯಾಲಿಟಿ ಶೋ ಗೆದ್ದು ಜನಪ್ರಿಯತೆ ಗಳಿಸಿರುವ ಗಿಲ್ಲಿ ನಟ, ಈಗ ಬೆಳ್ಳಿಪರದೆ ಮೇಲೆ ಹಳ್ಳಿ ಹೈದನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ವಿಶಿಷ್ಟ ಗ್ರಾಮೀಣ ಸೊಗಡಿನ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಗಿಲ್ಲಿ ನಟ ಅವರಿಗೆ ಸದ್ಯ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಈಗ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸರ್ವೇ ನಂಬರ್ 45' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತಕ್ಕೆ ತಲುಪಿವೆ. ವರನಂದಿ ಸಿನಿ ಸಂಸ್ಥೆ ಅಡಿಯಲ್ಲಿ ಆನಂದ್ ಎಸ್.ವಿ. ಮತ್ತು ಹನುಮಂತರೆಡ್ಡಿ ಎಸ್.ಆರ್. ಈ ಚಿತ್ರಕ್ಕೆ ಸಹ-ನಿರ್ಮಾಣ ಮಾಡಿದ್ದಾರೆ.
ಹುಣಸೂರು ಸುತ್ತಮುತ್ತ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಈ ಸಿನಿಮಾಗೆ ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದ ಎರಡು ಹಾಡುಗಳನ್ನು ಕೂಡ ಅವರೇ ರಚಿಸಿದ್ದಾರೆ. ಇನ್ನುಳಿದಂತೆ ವಿಶಾಲ್ ಅಲಾಪ್ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಜಿ.ಕೆ. ಛಾಯಾಗ್ರಹಣ ಹಾಗೂ ರಾಮಾರ್ಜುನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಕ್ರಿ ಕಿರಿಸಾವೆ ಸಂಭಾಷಣೆ ಬರೆದಿದ್ದು, ರಘು ಆರ್.ಜೆ. ನೃತ್ಯ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ಗಿಲ್ಲಿ ನಟ ಅವರಿಗೆ ಜೋಡಿಯಾಗಿ ಮತ್ತು ಪ್ರಮುಖ ಪಾತ್ರಗಳಲ್ಲಿ ಕಿರುತೆರೆಯ ಹಲವು ಪ್ರಸಿದ್ಧ ಕಲಾವಿದರು ಸಾಥ್ ನೀಡಿದ್ದಾರೆ. ಸಂತೋಷ್, 'ಮಹಾನಟಿ' ಖ್ಯಾತಿಯ ಪ್ರಾವಲಿಕ, ಮೌನ ಹಾಸನ್, ಕುಮಾರ್ ಅರಸೇಗೌಡ, ಮಾಲತಿ, ಮನು ಕಲ್ಲಹಳ್ಳಿ, ಶಿವಣ್ಣ, ಜ್ಯೂ. ದ್ವಾರಕೀಶ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಸಂಪೂರ್ಣ ಗ್ರಾಮೀಣ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರವು, ಸರ್ಕಾರದಿಂದ ಸರ್ವೇ ನಂಬರ್ ಪಡೆದ ರೈತನೊಬ್ಬನ ಜಮೀನಿನ ಸುತ್ತ ಸಾಗುತ್ತದೆ. ಆ ಜಮೀನಿನ ಕಾರಣವಾಗಿ ರೈತನಿಗೆ ಎದುರಾಗುವ ಸಾಲು ಸಾಲು ಸಮಸ್ಯೆಗಳನ್ನು ಆತ ತನ್ನ ಚಾಣಾಕ್ಷತನ ಹಾಗೂ ಒಳ್ಳೆತನದಿಂದ ಹೇಗೆ ಎದುರಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ರೋಚಕವಾಗಿ ತೋರಿಸಲಾಗಿದೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ, ಕೆಟ್ಟದ್ದನ್ನು ಆರಿಸಿಕೊಂಡರೆ ಕೆಡಕೇ ಆಗುತ್ತದೆ ಎಂಬ ಉತ್ತಮ ಸಾಮಾಜಿಕ ಸಂದೇಶವನ್ನು ಹೊತ್ತು ಈ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

