
ಬೆಂಗಳೂರಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಅವರಿಗೆ ತಡರಾತ್ರಿ ರಸ್ತೆಯಲ್ಲಿ ಅಪರಿಚಿತನೊಬ್ಬ ಕಿರುಕುಳ ನೀಡಿದ್ದಾನೆ.
ಬೆಂಗಳೂರಿನ ರಸ್ತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ಗೆ ಕಿರುಕುಳ
ಬೆಂಗಳೂರಿನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಅವರಿಗೆ ತಡರಾತ್ರಿ ರಸ್ತೆಯಲ್ಲಿ ಅಪರಿಚಿತನೊಬ್ಬ ಕಿರುಕುಳ ನೀಡಿದ್ದಾನೆ.
ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಹಾಗೂ ಖ್ಯಾತ ನಟಿ ದಿವ್ಯಾ ಸುರೇಶ್ ಅವರಿಗೆ ಭಾನುವಾರ ತಡರಾತ್ರಿ ನಗರದ ರಸ್ತೆಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಂದ ಕಿರುಕುಳ ಹಾಗೂ ಅಸಭ್ಯ ವರ್ತನೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮಗಾದ ಕಹಿ ಅನುಭವವನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸರ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಭಾನುವಾರ ತಡರಾತ್ರಿ ಸುಮಾರು 11.30ರ ವೇಳೆಗೆ ದಿವ್ಯಾ ಸುರೇಶ್ ಅವರು ತಮ್ಮ ಸೋದರ ಸಂಬಂಧಿ ಜೊತೆಗೆ ರಸ್ತೆಯಲ್ಲಿ ನಡೆದುಕೊಂಡು ಕಾರಿನತ್ತ ತೆರಳುತ್ತಿದ್ದರು. ಈ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇವರನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ಹೆಣ್ಣುಮಕ್ಕಳೆಂಬ ಭಯವಿಲ್ಲದೆ ಸಾರ್ವಜನಿಕವಾಗಿ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಾ ತನ್ನನ್ನು ತಾನು ಮುಟ್ಟಿಕೊಳ್ಳಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ನಟಿ ಮತ್ತು ಅವರ ಸಂಬಂಧಿ ತಕ್ಷಣವೇ ಆತನನ್ನು ತರಾಟೆಗೆ ತೆಗೆದುಕೊಂಡರೂ, ಆತ ತನ್ನ ವಿಕೃತ ಚೇಷ್ಟೆಯನ್ನು ನಿಲ್ಲಿಸಿಲ್ಲ. ಇದರಿಂದ ಗಾಬರಿಗೊಂಡ ಅವರು ತಕ್ಷಣ ಕಾರಿನೊಳಗೆ ಕುಳಿತು ಸುರಕ್ಷಿತವಾಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಆದರೂ ಆ ಕಾಮುಕ ಕಾರಿನ ಬಳಿಗೂ ಬಂದು ತನ್ನ ಹುಚ್ಚಾಟ ಮುಂದುವರಿಸಿದ್ದಾನೆ ಎಂದು ನಟಿ ತಿಳಿಸಿದ್ದಾರೆ.
ಈ ಇಡೀ ಘಟನೆಯನ್ನು ದಿವ್ಯಾ ಸುರೇಶ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ನಟಿಯ ಸಂಬಂಧಿ ಆತನ ಕೈಚಳಕವನ್ನು ತೋರಿಸುತ್ತಾ "ಅವನ ಕೈ ನೋಡಿ" ಎಂದು ಹೇಳುತ್ತಿರುವುದು ಮತ್ತು ನಟಿ ಪೊಲೀಸರಿಗೆ ಕರೆ ಮಾಡಲು ತಿಳಿಸುತ್ತಿರುವುದು ಕೇಳಿಬರುತ್ತದೆ. ನಂತರ ಇವರ ಕೂಗಾಟವನ್ನು ಕೇಳಿ ಸ್ಥಳೀಯರು ಹಾಗೂ ಬೈಕ್ ಸವಾರರೊಬ್ಬರು ಬಂದು ಆತನನ್ನು ತರಾಟೆಗೆ ತೆಗೆದುಕೊಂಡಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಈ ಘಟನೆಯ ಕುರಿತು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿರುವ ದಿವ್ಯಾ ಸುರೇಶ್, "ರಾತ್ರಿ ವೇಳೆ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ ಎಂಬ ಕಾರಣಕ್ಕೆ ಇಂತಹ ಕಿರುಕುಳ ನೀಡಬಾರದು. ನಮಗೆ ಭರವಸೆ ನೀಡಲಾಗುತ್ತಿರುವ ಮಹಿಳಾ ಸುರಕ್ಷತೆ ಎಲ್ಲಿದೆ?" ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ನೇರ ಪ್ರಶ್ನೆ ಹಾಕಿದ್ದಾರೆ.
ಮಾಡಲ್ ಆಗಿ ವೃತ್ತಿಜೀವನ ಆರಂಭಿಸಿ, 2017ರಲ್ಲಿ 'ಮಿಸ್ ಇಂಡಿಯಾ ಸೌತ್' ಕಿರೀಟ ಮುಡಿಗೇರಿಸಿಕೊಂಡಿದ್ದ ದಿವ್ಯಾ ಸುರೇಶ್, ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8ರ ಮೂಲಕ ಮನೆಮಾತಾಗಿದ್ದರು. 'ನನ್ನ ಹೆಂಡ್ತಿ ಎಂಬಿಬಿಎಸ್', 'ಜೋಡಿ ಹಕ್ಕಿ' ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲಿ ಹಾಗೂ 'ರೌಡಿ ಬೇಬಿ', 'ಹಿರಣ್ಯ' ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇನ್ನು ಕಳೆದ ವರ್ಷ ಅಕ್ಟೋಬರ್ 4ರಂದು ಬೆಂಗಳೂರಿನ ಬ್ಯಾಟರಾಯನಪುರ ಬಳಿ ಮೂವರು ಗಾಯಗೊಂಡಿದ್ದ ತಡರಾತ್ರಿಯ ಹಿಟ್ ಆಂಡ್ ರನ್ ಅಪಘಾತ ಪ್ರಕರಣದಲ್ಲಿ ದಿವ್ಯಾ ಸುರೇಶ್ ಅವರ ಕಾರು ಭಾಗಿಯಾಗಿತ್ತು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರನ್ನು ಗುರುತಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಆ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಸಂಚಾರಿ ಪಶ್ಚಿಮ ವಿಭಾಗದ ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದರು. ಸದ್ಯ ನಟಿಗೆ ರಸ್ತೆಯಲ್ಲಿ ಕಿರುಕುಳ ನೀಡಿರುವ ಈ ಹೊಸ ಘಟನೆ ನಗರದಲ್ಲಿ ತಡರಾತ್ರಿ ಮಹಿಳೆಯರ ಮುಕ್ತ ಓಡಾಟಕ್ಕೆ ಇರುವ ಸುರಕ್ಷತೆಯ ಕೊರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

