ಬೆಂಗಳೂರಲ್ಲಿ ಭಾರಿ ಆಲಿಕಲ್ಲು ಮಳೆ: ಮೇ 24ರವರೆಗೆ ನಗರಕ್ಕೆ ಯೆಲ್ಲೋ ಅಲರ್ಟ್
x

ಬೆಂಗಳೂರಿನಲ್ಲಿ ಭಾರಿ ಆಲಿಕಲ್ಲು ಮಳೆಗೆ ಮರಗಳು ಧರೆಗುರುಳಿದ ಮರ.

ಬೆಂಗಳೂರಲ್ಲಿ ಭಾರಿ ಆಲಿಕಲ್ಲು ಮಳೆ: ಮೇ 24ರವರೆಗೆ ನಗರಕ್ಕೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ಭಾರಿ ಆಲಿಕಲ್ಲು ಮಳೆಗೆ ಮರಗಳು ಧರೆಗುರುಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮೇ 24ರವರೆಗೆ ನಗರಕ್ಕೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.


Click the Play button to hear this message in audio format

ರಾಜಧಾನಿ ಬೆಂಗಳೂರಿನಲ್ಲಿ ಇದೇ 24ರವರೆಗೆ ನಗರದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಗುರುವಾರ ಸಂಜೆ ಸುರಿದ ಭಾರಿ ಗಾಳಿ-ಮಳೆ ಮತ್ತು ಆಲಿಕಲ್ಲು ಮಳೆಯು ಇಡೀ ಸಿಲಿಕಾನ್ ಸಿಟಿಯನ್ನೇ ಅಸ್ತವ್ಯಸ್ತಗೊಳಿಸಿತ್ತು. ಮುಸ್ಸಂಜೆಯಾಗುತ್ತಿದ್ದಂತೆ ಇಡೀ ನಗರವನ್ನು ಕತ್ತಲೆ ಆವರಿಸಿಕೊಂಡಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ಸಾವಿರಾರು ವಾಹನ ಸವಾರರು ಹಾಗೂ ಸಾರ್ವಜನಿಕರು ಭಾರಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ನಗರದ ಹಲವೆಡೆ ಗಂಟೆಗೆ 46 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕೇವಲ ಕೆಲವೇ ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 44.2 ಮಿಮೀ ಮಳೆಯಾಗಿದ್ದು, ಹಲವೆಡೆ ಸ್ಥಳೀಯವಾಗಿ ತೀವ್ರ ಸ್ವರೂಪದ ಮಳೆ ದಾಖಲಾಗಿದೆ.

ಭಾರಿ ಮಳೆಯ ಪರಿಣಾಮವಾಗಿ ‘ನಮ್ಮ ಮೆಟ್ರೋ’ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಹೂಡಿ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ಕಬ್ಬಿಣದ ಶೀಟ್‌ಗಳು ಬಿದ್ದ ಕಾರಣ ಪರ್ಪಲ್ ಮತ್ತು ಗ್ರೀನ್ ಲೈನ್ ಮೆಟ್ರೋ ಸೇವೆಗಳು ಸುಮಾರು 20 ರಿಂದ 25 ನಿಮಿಷಗಳ ಕಾಲ ತಡವಾಗಿ ಚಲಿಸಿದವು. ಇದರಿಂದಾಗಿ ಮೆಜೆಸ್ಟಿಕ್ ಮತ್ತು ಆರ್.ವಿ. ರಸ್ತೆ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜನಜಂಗುಳಿ ತೀವ್ರವಾಗಿ ಹೆಚ್ಚಾಗಿ, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ವಿಜಯನಗರ, ಶಾಂತಿನಗರ, ಲಾಲಬಾಗ್, ಕಬ್ಬನ್ ಪಾರ್ಕ್, ಕೆ.ಆರ್. ಮಾರುಕಟ್ಟೆ, ಜಯನಗರ, ರಾಜಾಜಿನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿದೆ.

ಮಳೆಯಿಂದಾಗಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಂಕೇರಿ ರಸ್ತೆ, ಬ್ರಿಗೇಡ್ ರಸ್ತೆ, ಎಸ್‌ಜೆಪಿ ರಸ್ತೆ ಮತ್ತು ವರ್ತೂರು ಕೋಡಿ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕೆ.ಆರ್. ವೃತ್ತದ ಅಂಡರ್‌ಪಾಸ್ ಅನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು.

ಧರೆಗುರುಳಿದ ಮರಗಳು

ನಗರದಾದ್ಯಂತ ಬೀಸಿದ ಗಾಳಿಗೆ ಅರ್ಧ ಡಜನ್‌ಗಿಂತಲೂ ಹೆಚ್ಚು ಬೃಹತ್ ಮರಗಳು ಹಾಗೂ ಮರದ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದಿದ್ದು, ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ವಿಜಯನಗರ, ಶಾಂತಿನಗರ, ಲಾಲ್‌ಬಾಗ್, ಕಬ್ಬನ್ ಪಾರ್ಕ್, ರಾಜಾಜಿನಗರ ಮತ್ತು ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಮಧ್ಯಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಮೆಜೆಸ್ಟಿಕ್ ಮತ್ತು ಮೈಸೂರು ಬ್ಯಾಂಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಭಾರಿ ಮಳೆಯ ಮುನ್ನೆಚ್ಚರಿಕೆಯಾಗಿ ಬಿಬಿಎಂಪಿ ಅಧಿಕಾರಿಗಳು ಕೆ.ಆರ್. ವೃತ್ತದ ಅಂಡರ್‌ಪಾಸ್ ಅನ್ನು ಮುಚ್ಚಿದ್ದರಿಂದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾಯಿತು.

ಮರ ಬಿದ್ದ ಘಟನೆಗಳಿಂದ ನಗರದ ಹಲವೆಡೆ ವಾಹನಗಳು ಜಖಂಗೊಂಡಿವೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದಿದ್ದು, ಇಂದಿರಾನಗರದ 16ನೇ ಕ್ರಾಸ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೂ ಬೃಹತ್ ಮರ ಉರುಳಿ ಬಿದ್ದು ಹಾನಿಯಾಗಿದೆ.

ಇನ್ನು ಶಂಕರಮಠದ ಬಳಿ ದೊಡ್ಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ 15ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದವು. ಕೆ.ಆರ್. ಪುರಂ ಸಮೀಪದ ದೂರವಾಣಿ ನಗರದಲ್ಲಿ ಮರ ಬಿದ್ದು ಸ್ಕೂಟರ್ ಮತ್ತು ವಿದ್ಯುತ್ ಕಂಬ ಜಖಂಗೊಂಡಿದ್ದು, ರಾಮಮೂರ್ತಿ ನಗರದವರೆಗೆ ವಾಹನಗಳ ಸಾಲು ಹರಡಿತ್ತು. ಕೇತಮಾರನಹಳ್ಳಿಯಲ್ಲಿ ವರದರಾಜಸ್ವಾಮಿ ದೇವಸ್ಥಾನದ ಮೇಲೆ ಬೃಹತ್ ಮರ ಉರುಳಿದೆ. ಅದೃಷ್ಟವಶಾತ್ ಈ ಯಾವುದೇ ಘಟನೆಗಳಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Read More
Next Story