
ಮೊದಲ ಬಾರಿ ಸಿಎಂ ಕುರ್ಚಿಯಲ್ಲಿ ಕುಳಿತಾಗ 'ಮುದಲ್ವನ್' ಸಿನಿಮಾ ನೆನಪಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ನಟ ಅರ್ಜುನ್ ಸರ್ಜಾ.
`ಅಂದು ಸಿನಿಮಾ ಬೇಡವೆಂದಿದ್ದರು, ಇಂದು ನಿಜ ಜೀವನದಲ್ಲೇ ಸಿಎಂ ಆದ್ರು ವಿಜಯ್''
ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತಾಗ ತಮಗೆ ಮುದಲ್ವನ್ ಸಿನಿಮಾ ನೆನಪಾಗಿತ್ತು ಎಂದು ಸಿಎಂ ವಿಜಯ್ ಹೇಳಿದ್ದಾಗಿ ನಟ ಅರ್ಜುನ್ ಸರ್ಜಾ ಹೈದರಾಬಾದ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಚಿತ್ರರಂಗದ ಖ್ಯಾತ ನಟ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ತಮಿಳು ನಟ ದಳಪತಿ ವಿಜಯ್ ಕುರಿತು ಆಸಕ್ತಿದಾಯಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ತಮ್ಮ ಮುಂಬರುವ ಚಿತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್ ಅವರನ್ನು ಭೇಟಿಯಾದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮೊದಲ ಬಾರಿಗೆ ಸಿಎಂ ಕುರ್ಚಿಯ ಮೇಲೆ ಕುಳಿತಾಗ ತಮಗೆ 1999ರ ಸೂಪರ್ ಹಿಟ್ ಸಿನಿಮಾ 'ಮುದಲ್ವನ್' (ಕನ್ನಡದಲ್ಲಿ 'ಒನ್ ಡೇ ಸಿಎಂ') ನೆನಪಿಗೆ ಬಂದಿತ್ತು ಎಂದು ಸ್ವತಃ ವಿಜಯ್ ಅವರೇ ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಅರ್ಜುನ್ ಸರ್ಜಾ ತಿಳಿಸಿದ್ದಾರೆ.
ಈ ಹಿಂದೆ ನಿರ್ದೇಶಕ ಶಂಕರ್ ಅವರು 'ಮುದಲ್ವನ್' ಚಿತ್ರದ ಕಥೆಯನ್ನು ಮೊದಲು ವಿಜಯ್ ಅವರಿಗೇ ಇಟ್ಟುಕೊಂಡು ಸಿದ್ಧಪಡಿಸಿದ್ದರು. ಆದರೆ, ಆ ಸಮಯದಲ್ಲಿ ಕೇವಲ 20ರ ಹರೆಯದಲ್ಲಿದ್ದ ವಿಜಯ್ ಕೆಲವು ಕಾರಣಗಳಿಂದ ಆ ಚಿತ್ರವನ್ನು ತಿರಸ್ಕರಿಸಿದ್ದರು. ತದನಂತರ ಆ ಪಾತ್ರ ಅರ್ಜುನ್ ಸರ್ಜಾ ಅವರ ಪಾಲಾಗಿ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇತ್ತೀಚೆಗೆ ವಿಜಯ್ ಅವರು ರಾಜಕೀಯಕ್ಕೆ ಬಂದು ತಮಿಳುನಾಡಿನ ಸಿಎಂ ಆದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ತಿರಸ್ಕರಿಸಿದ್ದ ವಿಜಯ್ ಇಂದು ನಿಜ ಜೀವನದ 'ಮುದಲ್ವನ್' ಆಗಿದ್ದಾರೆ ಎಂಬ ಸಾಲು ಸಾಲು ಮೀಮ್ಸ್‌ಗಳು ಸಖತ್ ವೈರಲ್ ಆಗಿದ್ದವು.
ಈ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ, ಮುಖ್ಯಮಂತ್ರಿಯಾದ ಬಳಿಕ ವಿಜಯ್ ಅವರನ್ನು ಭೇಟಿಯಾದಾಗ ಈ ಮೀಮ್ಸ್‌ಗಳ ಬಗ್ಗೆ ಪ್ರಸ್ತಾಪವಾಯಿತು. ವಿಜಯ್ ಅವರು ಆ ಎಲ್ಲ ಮೀಮ್ಸ್‌ಗಳನ್ನು ನೋಡಿರುವುದಾಗಿ ನಗುತ್ತಲೇ ಒಪ್ಪಿಕೊಂಡರು. ಅಷ್ಟೇ ಅಲ್ಲದೆ, ಮೊದಲ ಬಾರಿಗೆ ಸಿಎಂ ಸ್ಥಾನದಲ್ಲಿ ಕುಳಿತಾಗ ತಮಗೆ 'ಮುದಲ್ವನ್' ಸಿನಿಮಾ ನೆನಪಾಯಿತು ಎಂದು ವಿಜಯ್ ಖುದ್ದಾಗಿ ಹೇಳಿದರು ಎಂದಿದ್ದಾರೆ. ನಮ್ಮ ಸಿನಿಮಾ ರಂಗದವರೇ ಆದ, ನಮ್ಮ ಜೊತೆ ಕೆಲಸ ಮಾಡಿದ ನಟರೊಬ್ಬರು ಇಂದು ಇಷ್ಟು ದೊಡ್ಡ ಮಟ್ಟದ ಜಯ ಸಾಧಿಸಿ ಮುಖ್ಯಮಂತ್ರಿಯಾಗಿರುವುದು ಇಡೀ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ ಎಂದು ಅರ್ಜುನ್ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.

