
ಆಲ್ಫಾ ಟ್ರೈಲರ್ ಬಿಡುಗಡೆಯಾಗಿದೆ.
ಆಲ್ಫಾ ಟ್ರೈಲರ್ ಬಿಡುಗಡೆ: ಆಲಿಯಾ ಭಟ್ ಈ ಪಾತ್ರಕ್ಕೆ ಮಿಸ್‌ಕಾಸ್ಟ್ ಎಂದ ನೆಟ್ಟಿಗರು
ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಆಲ್ಫಾ ಚಿತ್ರದ ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಲಿಯಾ ಭಟ್ ಆಕ್ಷನ್ ಪಾತ್ರದ ಆಯ್ಕೆ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಬಾಲಿವುಡ್‌ನ ಬಹುನಿರೀಕ್ಷಿತ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ 'ಆಲ್ಫಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಲಿಯಾ ಭಟ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಆಕ್ಷನ್ ಚಿತ್ರದ ಝಲಕ್ ಪ್ರೇಕ್ಷಕರಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ರೆಡ್ಡಿಟ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್ ಅವರ ಆಯ್ಕೆಯ ಬಗ್ಗೆ ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಅದ್ಧೂರಿ ಆಕ್ಷನ್ ಪಾತ್ರಗಳಿಗೆ ಆಲಿಯಾ ಸೂಕ್ತವಾಗಿ ಹೊಂದಿಕೊಳ್ಳುವುದಿಲ್ಲ ಮತ್ತು ಅವರು ಈ ಪಾತ್ರಕ್ಕೆ ಸಂಪೂರ್ಣ 'ಮಿಸ್‌ಕಾಸ್ಟ್' ಎಂದು ಟೀಕಿಸಿದ್ದಾರೆ.
ಅಷ್ಟೇ ಅಲ್ಲದೆ, ಚಿತ್ರದ ಆಕ್ಷನ್ ದೃಶ್ಯಗಳು ನೈಜವಾಗಿ ಕಾಣಿಸುತ್ತಿಲ್ಲ ಮತ್ತು ನಟಿಯರು ಆಕ್ಷನ್ ಮಾಡುವಾಗ ಗಂಭೀರತೆ ಕಾಣಿಸುತ್ತಿಲ್ಲ ಎಂದು ಕೆಲ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಟ್ರೈಲರ್‌ನಲ್ಲೇ ಇಡೀ ಕಥೆಯನ್ನು ಬಿಟ್ಟುಕೊಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೆ, ಟ್ರೈಲರ್‌ನಲ್ಲಿ ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಧನಾತ್ಮಕ ಅಂಶಗಳು ಪ್ರೇಕ್ಷಕರ ಗಮನ ಸೆಳೆದಿವೆ. ಚಿತ್ರದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ನಟಿ ಶರ್ವರಿ ಅವರ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದರೊಂದಿಗೆ, ಟ್ರೈಲರ್‌ನ ಕೊನೆಯಲ್ಲಿ ನಟ ಹೃತಿಕ್ ರೋಷನ್ ಅವರ 'ವಾರ್' ಚಿತ್ರದ 'ಕಬೀರ್' ಪಾತ್ರದ ಕ್ಯಾಮಿಯೋ ಝಲಕ್ ತೋರಿಸಿರುವುದು ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ ಚಿತ್ರದ ವಿಎಫ್‌ಎಕ್ಸ್ ಮತ್ತು ಮೇಕಿಂಗ್ ಭರವಸೆ ಮೂಡಿಸುವಂತಿದ್ದು, ಜುಲೈ 3 ರಂದು ತೆರೆಕಾಣಲಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಕಮಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ.

