ಪುಷ್ಪ ಬಳಿಕ ಮತ್ತೊಂದು ಬ್ರ್ಯಾಂಡ್ ಕ್ರಿಯೇಟ್ ಮಾಡಲಿದೆಯೇ ರಾಕಾ?
x

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ರಾಕಾ

'ಪುಷ್ಪ' ಬಳಿಕ ಮತ್ತೊಂದು ಬ್ರ್ಯಾಂಡ್ ಕ್ರಿಯೇಟ್ ಮಾಡಲಿದೆಯೇ 'ರಾಕಾ'?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ರಾಕಾ, ಪುಷ್ಪ 3 ಮತ್ತು ಅಟ್ಲೀ-ತ್ರಿವಿಕ್ರಮ್ ನಿರ್ದೇಶನದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳ ಸಂಪೂರ್ಣ ಮಾಹಿತಿ ಹಾಗೂ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ.


Click the Play button to hear this message in audio format

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನಾವರಣಗೊಳಿಸಿದ 'ರಾಕಾ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಈ ಶೀರ್ಷಿಕೆಯ ಆಯ್ಕೆಯ ಹಿಂದೆ 'ಪುಷ್ಪ' ಚಿತ್ರದ ಯಶಸ್ವಿ ಫಾರ್ಮುಲಾ ಅಡಗಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.

ನಿರ್ದೇಶಕ ಅಟ್ಲೀ ಈ ಸಿನಿಮಾವನ್ನು ಕೇವಲ ಒಂದು ಕಥೆಯಾಗಿ ನೋಡದೆ, ನಾಯಕನ ಹೆಸರನ್ನೇ ಒಂದು ಬಲಿಷ್ಠ ಬ್ರ್ಯಾಂಡ್ ಮಾಡುವ ನಿಟ್ಟಿನಲ್ಲಿ 'ರಾಕಾ' ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ 'ಪುಷ್ಪ' ಚಿತ್ರದಲ್ಲಿ 'ಪುಷ್ಪರಾಜ್' ಎಂಬ ಪಾತ್ರದ ಹೆಸರು ಹೇಗೆ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತೋ, ಅದೇ ಮಾದರಿಯಲ್ಲಿ 'ರಾಕಾ' ಎಂಬ ಹೆಸರು ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾಗಿ ಉಳಿಯಬೇಕು ಎಂಬುದು ಚಿತ್ರತಂಡದ ಯೋಜನೆಯಾಗಿದೆ. ಹೀಗಾಗಿ ಕಥಾಧಾರಿತ ಶೀರ್ಷಿಕೆಗಿಂತ ಪಾತ್ರಧಾರಿಯ ಹೆಸರಿಗೇ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.

ಇನ್ನು ಈ ಪ್ರಾಜೆಕ್ಟ್ ಬಗ್ಗೆ ಭಾವುಕರಾಗಿ ಮಾತನಾಡಿರುವ ನಿರ್ದೇಶಕ ಅಟ್ಲೀ, ಇದು ತಮ್ಮ 18 ವರ್ಷಗಳ ಕನಸಿನ ಕೂಸು ಎಂದು ಬಣ್ಣಿಸಿದ್ದಾರೆ. ಹಣೆ ಮೇಲೆ ವೈಕಿಂಗ್ ಶೈಲಿಯ ಟ್ಯಾಟೂಗಳು, ಮೊನಚಾದ ಉಗುರುಗಳ ಆಭರಣ ಹಾಗೂ ಕಣ್ಣಿನ ಕಪ್ಪು ಮೇಕಪ್‌ನೊಂದಿಗೆ ಅಲ್ಲು ಅರ್ಜುನ್ ಎಂದೂ ಕಂಡಿರದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಯುವ ಪ್ರತಿಭೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. 'ಪುಷ್ಪ 2' ನಂತರ ಜಾಗತಿಕ ಮಟ್ಟದ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅಲ್ಲು ಅರ್ಜುನ್ ಈ ಸಾಹಸಕ್ಕೆ ಕೈಹಾಕಿದ್ದಾರೆ.

ಪುಷ್ಪಾ ೩ ಗೂ ತಯಾರಿ

'ಪುಷ್ಪ' ಸರಣಿಯ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಎಂದರೆ ಸುಕುಮಾರ್ ನಿರ್ದೇಶನದ 'ಪುಷ್ಪ 3: ದಿ ರಾಂಪೇಜ್' ಚಿತ್ರಕ್ಕೂ ತಯಾರಿ ನಡೆಯುತ್ತಿದೆ. ಪುಷ್ಪರಾಜ್ ಅಬ್ಬರ ಈ ಭಾಗದಲ್ಲಿ ಜಾಗತಿಕ ಮಟ್ಟಕ್ಕೆ ವಿಸ್ತರಿಸಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ, 'ಅಲಾ ವೈಕುಂಠಪುರಮುಲೋ' ಖ್ಯಾತಿಯ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದು, ಸುಮಾರು 1000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಪೌರಾಣಿಕ ಹಿನ್ನೆಲೆಯ ಬೃಹತ್ ಸಿನಿಮಾವನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ, 'ಅನಿಮಲ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ಒಂದು ಹೈ-ವೋಲ್ಟೇಜ್ ಆಕ್ಷನ್ ಸಿನಿಮಾವನ್ನು ಅಲ್ಲು ಅರ್ಜುನ್ ಒಪ್ಪಿಕೊಂಡಿದ್ದಾರೆ. ಈ ಚಿತ್ರವು ಸಂದೀಪ್ ಅವರ 'ಸ್ಪಿರಿಟ್' ಸಿನಿಮಾದ ನಂತರ ಸೆಟ್ಟೇರಲಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೂ ಮಾತುಕತೆಗಳು ನಡೆಯುತ್ತಿದ್ದು, ಅವರ ಸಿನಿಮಾ ವಿಶ್ವದ (LCU) ಭಾಗವಾಗಿ ಅಥವಾ ಪ್ರತ್ಯೇಕ ಆಕ್ಷನ್ ಸಿನಿಮಾವಾಗಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಅಲ್ಲು ಅರ್ಜುನ್ ಮುಂದಿನ ಕೆಲವು ವರ್ಷಗಳ ಕಾಲ ಪ್ಯಾನ್ ಇಂಡಿಯಾ ಮಟ್ಟದ ಅತಿ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

Read More
Next Story