
ಇತ್ತೀಚೆಗೆ ವೈರಲ್ ಆಗಿರುವ ನಟನ 'ತೋಳ'ದ ಮಾದರಿಯ ರಗಡ್ ಲುಕ್ ವಾಸ್ತವವಾಗಿ ಎಐ (AI) ಸೃಷ್ಟಿತ ಚಿತ್ರಗಳಾಗಿವೆ.
Allu Arjun| ಅಟ್ಲೀ-ಅಲ್ಲು ಅರ್ಜುನ್ ಜೋಡಿಯ 'ರಾಕಾ': ಎಐ ಪೋಸ್ಟರ್ ವೈರಲ್, ಫ್ಯಾನ್ಸ್ ಫಿದಾ !
ಅಟ್ಲೀ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನ 'ರಾಕಾ' ಚಿತ್ರದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದೆ.
ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ 'ರಾಕಾ' ಚಿತ್ರದ ಫಸ್ಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದೆ. ನಟನ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾದ ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅತ್ಯಂತ ರಗಡ್ ಮತ್ತು ತೀವ್ರವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.
ಮೊದಲು ಬಿಡುಗಡೆಯಾದ ಪೋಸ್ಟರ್‌ನಲ್ಲಿ ನಟನ ಮುಖ ಮತ್ತು ತೋಳಿನ ಭಾಗ ಮಾತ್ರ ಕಂಡುಬಂದಿದ್ದು, ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಕಲ್ಪನೆ ಮಾಡಿಕೊಳ್ಳುತ್ತಿದ್ದರು. ಈ ನಡುವೆ ಸೆಟ್‌ನಿಂದ ಲೀಕ್ ಆಗಿದೆ ಎನ್ನಲಾದ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಅಲ್ಲು ಅರ್ಜುನ್ ತುಪ್ಪಳ( ಪ್ರಾಣಿಗಳ ಮೃದುವಾದ ರೋಮ) ಮತ್ತು ಉಗುರುಗಳಿರುವ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಫೋಟೋಗಳು ಕೃತಕ ಬುದ್ಧಿಮತ್ತೆ ಅಥವಾ ಎಐ ಮೂಲಕ ಸೃಷ್ಟಿಸಲಾದ ಚಿತ್ರಗಳೆಂದು ದೃಢಪಟ್ಟಿದೆ. ಈ ಚಿತ್ರಗಳನ್ನು ಹಂಚಿಕೊಂಡ ಇನ್‌ಸ್ಟಾಗ್ರಾಮ್ ಖಾತೆಯು ಇವು ಎಐ ಸೃಷ್ಟಿತ ಚಿತ್ರಗಳೆಂದು ಸ್ಪಷ್ಟಪಡಿಸಿದೆ.
ಅಲ್ಲು ಅರ್ಜುನ್ ಅವರ ಈ ವಿನೂತನ ಲುಕ್ ಅನ್ನು ಕಂಡ ಸಿನಿಪ್ರಿಯರು ಇದನ್ನು ಕಾರ್ತಿ ನಟನೆಯ 'ಕಾಶ್ಮೋರಾ' ಚಿತ್ರದ ಲುಕ್‌ಗೆ ಹೋಲಿಸುತ್ತಿದ್ದಾರೆ. ಇನ್ನು ಕೆಲವರು ಸೂರ್ಯ ಅಭಿನಯದ 'ಕಂಗುವಾ' ಚಿತ್ರದ ಕಾಸ್ಟ್ಯೂಮ್ ಮತ್ತು ಬಾಹುಬಲಿ ಚಿತ್ರದ ವಿಲನ್ ಪಾತ್ರಗಳಿಗೂ ಇದನ್ನು ಹೋಲಿಸಿ ಚರ್ಚಿಸುತ್ತಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿದೆ.
ನಿರ್ದೇಶಕ ಅಟ್ಲೀ ಅವರು ಈ ಚಿತ್ರದ ಬಗ್ಗೆ ಭಾವುಕವಾಗಿ ಮಾತನಾಡಿದ್ದು, 'ರಾಕಾ' ಕೇವಲ ಒಂದು ಸಿನಿಮಾವಲ್ಲ, ಇದು ನನ್ನ 18 ವರ್ಷಗಳ ಕನಸು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರ ಮೊದಲ ಸಿನಿಮಾವಾಗಿದೆ.

