
ಕಾನ್ ಚಲನಚಿತ್ರೋತ್ಸವದ ಆನ್‌ಲೈನ್ ಟ್ರೋಲಿಂಗ್ ಬೆನ್ನಲ್ಲೇ ನಟಿ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಜೊತೆಯಾಗಿ ಮುಂಬೈಗೆ ಮರಳಿದ್ದಾರೆ.
ಟ್ರೋಲ್ ಬೆನ್ನಲ್ಲೇ ರಣಬೀರ್ ಜೊತೆ ಮುಂಬೈಗೆ ಮರಳಿದ ಆಲಿಯಾ ಭಟ್
ಕಾನ್ ಚಿತ್ರೋತ್ಸವದ ಟ್ರೋಲಿಂಗ್ ಬೆನ್ನಲ್ಲೇ ನಟಿ ಆಲಿಯಾ ಭಟ್ ಪತಿ ರಣಬೀರ್ ಕಪೂರ್ ಜೊತೆ ಮುಂಬೈಗೆ ಮರಳಿದ್ದಾರೆ. ಟ್ರೋಲಿಗರಿಗೆ ಆಲಿಯಾ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಬಾಲಿವುಡ್ ತಾರೆ ಆಲಿಯಾ ಭಟ್ ಭಾನುವಾರ ತಡರಾತ್ರಿ ಮುಂಬೈಗೆ ಮರಳಿದ್ದಾರೆ. ಕಾನ್ ರೆಡ್ ಕಾರ್ಪೆಟ್ ಮೇಲಿನ ಅವರ ಉಪಸ್ಥಿತಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಲು ಯತ್ನಿಸಿದ್ದು, ಈ ಸಂಕಷ್ಟದ ಸಮಯದಲ್ಲಿ ಪತಿ ರಣಬೀರ್ ಕಪೂರ್ ಅವರು ಆಲಿಯಾ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ.
ಮುಂಬೈ ವಿಮಾನ ನಿಲ್ದಾಣಕ್ಕೆ ಒಟ್ಟಿಗೆ ಆಗಮಿಸಿದ ಈ ತಾರಾ ದಂಪತಿಯನ್ನು ಮಾಧ್ಯಮದವರು ಮತ್ತು ಛಾಯಾಗ್ರಾಹಕರು ಆತ್ಮೀಯವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಬರುವಾಗ ರಣಬೀರ್ ಕಪೂರ್ ಮುಂಚೂಣಿಯಲ್ಲಿ ನಿಂತು ಪಾಪರಾಜಿಗಳಿಗೆ ನಮಸ್ಕರಿಸಿ ಬರಮಾಡಿಕೊಂಡರೆ, ಆಲಿಯಾ ಭಟ್ ಅವರನ್ನು ಹಿಂಬಾಲಿಸಿದರು. 'ರಾಮಾಯಣ' ಚಿತ್ರಕ್ಕಾಗಿ ಕ್ಲೀನ್ ಶೇವ್ ಹಾಗೂ 'ಲವ್ ಅಂಡ್ ವಾರ್' ಚಿತ್ರಕ್ಕಾಗಿ ಮೀಸೆ ಬಿಟ್ಟಿದ್ದ ರಣಬೀರ್, ಇದೀಗ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಕಾನ್ ಚಿತ್ರೋತ್ಸವದಲ್ಲಿ ಸೌಂದರ್ಯ ವರ್ಧಕ ಬ್ರಾಂಡ್ ಒಂದರ ಜಾಗತಿಕ ರಾಯಭಾರಿಯಾಗಿ ಆಲಿಯಾ ಭಟ್ ಭಾಗವಹಿಸಿದ್ದರು. ಅಲ್ಲಿ ಫಾರ್ಮುಲಾ ಒನ್ ರೇಸಿಂಗ್ ತಾರೆಗಳಾದ ಕಾರ್ಲೋಸ್ ಸೈನ್ಜ್ ಮತ್ತು ಚಾರ್ಲ್ಸ್ ಲೆಕ್ಲರ್ಕ್ ಅವರೊಂದಿಗೆ ಆಲಿಯಾ ನಡೆಸಿದ ಮಾತುಕತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಇದೇ ವೇಳೆ, ಅಂತರರಾಷ್ಟ್ರೀಯ ಮಾಧ್ಯಮಗಳು ಆಲಿಯಾ ಅವರನ್ನು ಕಡೆಗಣಿಸಿದವು ಎಂದು ಬಿಂಬಿಸುವ ವಿಡಿಯೋಗಳನ್ನು ಹಂಚಿಕೊಂಡು ಕೆಲವರು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದರು.
ಆನ್‌ಲೈನ್ ಟ್ರೋಲ್‌ಗಳ ವಿರುದ್ಧ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ತೀವ್ರ ಅಸಮಾಧಾನ ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ, ಮಾಹಿತಿ ಹಾಗೂ ಮನರಂಜನೆಯ ಜೊತೆಗೆ ಅತಿಯಾದ ದ್ವೇಷವೂ ತುಂಬಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಕಾನ್‌ನಲ್ಲಿ ನಿಮ್ಮನ್ನು ಯಾರೂ ಗಮನಿಸಲೇ ಇಲ್ಲ ಎಂದು ಕಾಮೆಂಟ್ ಮಾಡಿದ್ದ ಟ್ರೋಲಿಗನಿಗೆ ಸ್ವತಃ ಆಲಿಯಾ ಭಟ್ ಅವರೇ ಅತ್ಯಂತ ಘನತೆಯಿಂದ ಹಾಗೂ ಚಾಣಾಕ್ಷತನದಿಂದ ಪ್ರತ್ಯುತ್ತರ ನೀಡಿದ್ದು, ಅದಕ್ಕೇಕೆ ವಿಷಾದಿಸುತ್ತೀರಿ, ನೀವಾದರೂ ನನ್ನನ್ನು ಗಮನಿಸಿದಿರಲ್ಲ ಎಂದು ಬರೆಯುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ಸದ್ಯ ಆಲಿಯಾ ಭಟ್ ಅವರು ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಮಹಿಳಾ ಪ್ರಧಾನ ಆಕ್ಷನ್ ಚಿತ್ರ 'ಆಲ್ಫಾ'ದಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಪತಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆ ಸಂಜಯ್ ಲೀಲಾ ಬನ್ಸಾಲಿ ಅವರ 'ಲವ್ ಅಂಡ್ ವಾರ್' ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

