
ಪಾಕಿಸ್ತಾನಿ ಕ್ಲೋದಿಂಗ್ ಬ್ರ್ಯಾಂಡ್‌ನಿಂದ ಆಲಿಯಾ ಭಟ್ ಎಐ ಚಿತ್ರಗಳ ದುರ್ಬಳಕೆ
Alia Bhatt| ಆಲಿಯಾ ಭಟ್ ನಕಲಿ ಚಿತ್ರಗಳ ಬಳಕೆ: ಪಾಕಿಸ್ತಾನಿ ಬ್ರ್ಯಾಂಡ್ ವಿರುದ್ಧ ಭುಗಿಲೆದ್ದ ಆಕ್ರೋಶ
ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್ ಒಂದು ನಟಿ ಆಲಿಯಾ ಭಟ್ ಅವರ ಮಾರ್ಫಿಂಗ್ ಮಾಡಿದ ಎಐ ಫೋಟೋಗಳನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ದುರ್ಬಳಕೆಯ ಮತ್ತೊಂದು ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಿವುಡ್‌ನ ಮುಂಚೂಣಿ ನಟಿ ಆಲಿಯಾ ಭಟ್ ಅವರ ನಕಲಿ ಫೋಟೋಗಳನ್ನು ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್ ಒಂದು ತನ್ನ ವಾಣಿಜ್ಯ ಲಾಭಕ್ಕಾಗಿ ಬಳಸಿಕೊಂಡಿರುವುದು ತೀವ್ರ ವಿವಾದ ಸೃಷ್ಟಿಸಿದೆ. ನಟಿಯ ಯಾವುದೇ ಪೂರ್ವಾನುಮತಿ ಪಡೆಯದೆ, ಅವರ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸಿರುವ ಈ ಕೃತ್ಯದ ವಿರುದ್ಧ ಭಾರತೀಯ ನೆಟ್ಟಿಗರು ಹಾಗೂ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮೂಲದ ಈ ಉಡುಪುಗಳ ಬ್ರ್ಯಾಂಡ್, ತನ್ನ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಆಲಿಯಾ ಭಟ್ ಅವರ ನೈಜ ಚಿತ್ರಗಳ ಜೊತೆಗೆ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಮಾರ್ಫಿಂಗ್ ಫೋಟೋಗಳನ್ನು ಹಂಚಿಕೊಂಡಿದೆ. ವಿಶೇಷವಾಗಿ ಸೀರೆ ಮತ್ತು ಸಲ್ವಾರ್ ಸೂಟ್‌ಗಳ ಮಾರಾಟವನ್ನು ಹೆಚ್ಚಿಸುವ ದುರುದ್ದೇಶದಿಂದ, ನಟಿಯ ಮುಖವನ್ನು ಅನ್ಯ ಮಾಡೆಲ್‌ಗಳ ದೇಹಕ್ಕೆ ಅಂಟಿಸಲಾಗಿದೆ. ಅಷ್ಟೇ ಅಲ್ಲದೆ, "ಆಲಿಯಾ ಭಟ್‌ಗೂ ನಮ್ಮ ಸಿಲ್ಕ್ ಕಲೆಕ್ಷನ್ ಎಂದರೆ ಇಷ್ಟ" ಎಂಬ ಸುಳ್ಳು ಅಡಿಬರಹವನ್ನು ನೀಡುವ ಮೂಲಕ ಗ್ರಾಹಕರ ದಾರಿ ತಪ್ಪಿಸುವ ಯತ್ನ ಮಾಡಲಾಗಿದೆ.
ಈ ಅಕ್ರಮ ಕೃತ್ಯವು ಬೆಳಕಿಗೆ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಯಾವುದೇ ಓರ್ವ ಸೆಲೆಬ್ರಿಟಿಯ ಚಿತ್ರಗಳನ್ನು ಅವರ ಅನುಮತಿಯಿಲ್ಲದೆ, ಕೇವಲ ಬ್ರ್ಯಾಂಡ್ ಪ್ರಚಾರಕ್ಕಾಗಿ ಹಾಗೂ ಲಾಭದ ಉದ್ದೇಶಕ್ಕಾಗಿ ಬಳಸುವುದು ಕಾನೂನುಬಾಹಿರ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಇದೊಂದು ಕೀಳುಮಟ್ಟದ ಮಾರ್ಕೆಟಿಂಗ್ ತಂತ್ರ ಎಂದು ಕಿಡಿಕಾರಿರುವ ನೆಟ್ಟಿಗರು, ಬೌದ್ಧಿಕ ಆಸ್ತಿ ಹಕ್ಕುಗಳ (IP Rights) ಕಳ್ಳತನದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವ್ಯಕ್ತಿತ್ವದ ಹಕ್ಕುಗಳ ಕನಿಷ್ಠ ಜ್ಞಾನವಿಲ್ಲದೆ ಉದ್ಯಮಕ್ಕಾಗಿ ಹೀಗೆ ಕಳ್ಳತನ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಬಳಕೆದಾರರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಆಲಿಯಾ ಭಟ್ ಅವರ ಕಾನೂನು ತಂಡವು ಈ ಕೂಡಲೇ ಎಚ್ಚೆತ್ತುಕೊಂಡು ಸದರಿ ಬ್ರ್ಯಾಂಡ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅಧಿಕೃತ ದೂರು ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಶ್ಚಾತಾಪವೇ ಇಲ್ಲ
ಇಷ್ಟೆಲ್ಲಾ ಟೀಕೆಗಳು, ವಿರೋಧಗಳು ವ್ಯಕ್ತವಾಗುತ್ತಿದ್ದರೂ ಪಾಕಿಸ್ತಾನಿ ಬ್ರ್ಯಾಂಡ್ ಮಾತ್ರ ಕಿಂಚಿತ್ತೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಮಾಡುತ್ತಿರುವ ಕಮೆಂಟ್‌ಗಳಿಗೆ ತೀರಾ ಉದ್ಧಟತನದಿಂದಲೇ ಪ್ರತಿಕ್ರಿಯಿಸುತ್ತಿದೆ. ಎದುರಾಗಿರುವ ವಿವಾದದಿಂದಲೇ ನಮಗೆ ಹೆಚ್ಚು ಪ್ರಚಾರ (Negative Publicity) ಸಿಗಲಿ ಎಂಬಂತೆ ಸಂಸ್ಥೆ ವರ್ತಿಸುತ್ತಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಈ ವಿವಾದದ ಕುರಿತು ಆಲಿಯಾ ಭಟ್ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೂ, ಈ ಘಟನೆಯು ಎಐ ತಂತ್ರಜ್ಞಾನದ ಮಿತಿಮೀರಿದ ದುರ್ಬಳಕೆ ಮತ್ತು ಸೆಲೆಬ್ರಿಟಿಗಳ ಖಾಸಗಿತನದ ರಕ್ಷಣೆಯ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.
ಆಲಿಯಾ ಭಟ್ ಬ್ಯುಸಿ
ಈ ವಿವಾದಗಳ ಆಚೆಗೆ, ನಟಿ ಆಲಿಯಾ ಭಟ್ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡು ವಿಮರ್ಶಕರ ಪ್ರಶಂಸೆ ಗಳಿಸಿದ 'ಜಿಗ್ರಾ' ಸಿನಿಮಾದ ಯಶಸ್ಸಿನ ಬೆನ್ನಲ್ಲೇ, ಅವರು ಸಾಲು ಸಾಲು ಬೃಹತ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ, 'ಸ್ಪೈ ಯೂನಿವರ್ಸ್'ನ ಮೊದಲ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ 'ಆಲ್ಫಾ' ಮುಂಬರುವ ಜುಲೈ 10ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಶರ್ವರಿ ವಘ್ ಮತ್ತು ಖಳನಾಯಕನಾಗಿ ಬಾಬಿ ಡಿಯೋಲ್ ನಟಿಸಿರುವ ಈ ಚಿತ್ರದಲ್ಲಿ ಆಲಿಯಾ ಅವರ ರಗಡ್ ಲುಕ್ ಇರುವ ಪೋಸ್ಟರ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದೆ. ಇದರೊಂದಿಗೆ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ 'ಲವ್ ಅಂಡ್ ವಾರ್' ಚಿತ್ರದಲ್ಲಿ ತಮ್ಮ ಪತಿ ರಣಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಗೆ, ಫರ್ಹಾನ್ ಅಖ್ತರ್ ನಿರ್ದೇಶನದ ಮಹಿಳಾ ಪ್ರಧಾನ ರೋಡ್ ಟ್ರಿಪ್ ಸಿನಿಮಾ 'ಜೀ ಲೇ ಜರಾ' ಮತ್ತು ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ ಪಾರ್ಟ್ 2' ಚಿತ್ರಗಳು ಸಹ ಆಲಿಯಾ ಅವರ ಮುಂಬರುವ ಯೋಜನೆಗಳ ಪಟ್ಟಿಯಲ್ಲಿದ್ದು, ಈ ಚಿತ್ರಗಳ ಅಧಿಕೃತ ಬಿಡುಗಡೆ ದಿನಾಂಕಗಳಿಗಾಗಿ ಚಿತ್ರರಂಗ ಹಾಗೂ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

