
ಆರಂಭದ ಹತ್ತು ವರ್ಷ ಕೇವಲ ಆಕ್ಷನ್ ಸಿನಿಮಾಗಳನ್ನೇ ಮಾಡಿದ್ದಕ್ಕೆ ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಳ್ಳಬೇಕು ಎನಿಸುತ್ತಿತ್ತು ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ತಮ್ಮ ಸಿನಿಮಾಗಳ ಬಗ್ಗೆಯೇ ಅಕ್ಷಯ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದೇಕೆ?
ಆರಂಭದ ಹತ್ತು ವರ್ಷ ಕೇವಲ ಆಕ್ಷನ್ ಸಿನಿಮಾಗಳನ್ನೇ ಮಾಡಿದ್ದಕ್ಕೆ ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಳ್ಳಬೇಕು ಎನಿಸುತ್ತಿತ್ತು ಎಂದು ನಟ ಅಕ್ಷಯ್ ಕುಮಾರ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಚಿತ್ರರಂಗದಲ್ಲಿ ತಮ್ಮ ಸುದೀರ್ಘ 35 ವರ್ಷಗಳ ಪಯಣದ ಬಗ್ಗೆ ಮಹತ್ವದ ಬಹಿರಂಗವಾಗಿಯೇ ಮಾತನಾಡಿದ್ದಾರೆ. ಆರಂಭದಲ್ಲಿ ಕೇವಲ ಹಣ ಸಂಪಾದಿಸುವ ಏಕೈಕ ಉದ್ದೇಶದಿಂದ ಚಿತ್ರರಂಗಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿರುವ ಅವರು, ಮೊದಲ ಹತ್ತು ವರ್ಷಗಳ ಕಾಲ ಕೇವಲ ಆಕ್ಷನ್ ಸಿನಿಮಾಗಳಿಗಷ್ಟೇ ಸೀಮಿತವಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ತಮ್ಮದೇ ಸಿನಿಮಾಗಳನ್ನು ನೋಡಿದಾಗ ತಮಗೆ ತಾವೇ ಕಪಾಳಮೋಕ್ಷ ಮಾಡಿಕೊಳ್ಳಬೇಕು ಎನಿಸುತ್ತಿತ್ತು ಎಂದು ಅಕ್ಷಯ್ ಕುಮಾರ್ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೊದಲ ದಶಕದ ನಂತರ ತಾವು ಕೇವಲ ಆಕ್ಷನ್ ಸ್ಟಾರ್ ಇಮೇಜ್‌ಗೆ ಸಿಲುಕಿಕೊಂಡಿರುವುದು ಮನವರಿಕೆಯಾಯಿತು ಎಂದಿದ್ದಾರೆ. ಜನ ಯಾರು ಕೂಡ ತಮಗೆ ಬೇರೆ ರೀತಿಯ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆ ಇಮೇಜ್‌ನಿಂದ ಹೊರಬರಲು ತಾವು ತೀವ್ರವಾಗಿ ಬಯಸಿದ್ದರಿಂದಲೇ ಮುಂದೆ 'ಹೇರಾ ಫೇರಿ', 'ಧಡ್ಕನ್', 'ಮುಜ್ಸೇ ಶಾದಿ ಕರೋಗಿ', 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಮತ್ತು 'ಪ್ಯಾಡ್‌ಮ್ಯಾನ್' ನಂತಹ ವೈವಿಧ್ಯಮಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾ ಬಂದಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ ವರ್ಷಕ್ಕೆ ನಾಲ್ಕು ಸಿನಿಮಾಗಳನ್ನು ಮಾಡುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ 58 ವರ್ಷದ ನಟ, ಪ್ರತಿದಿನ ಕೆಲಸ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸುವುದಾಗಿ ಹೇಳಿದ್ದಾರೆ. ಚಿತ್ರಗಳು ಹಿಟ್ ಅಥವಾ ಫ್ಲಾಪ್ ಆಗುವುದು ವ್ಯವಹಾರದ ಭಾಗ, ಆದರೆ ಚಿತ್ರರಂಗದಲ್ಲಿ ಹೆಚ್ಚಿನ ಕೆಲಸ ಮತ್ತು ಉದ್ಯೋಗ ಸೃಷ್ಟಿಯಾಗಲು ತಾವು ನಿರಂತರವಾಗಿ ನಟಿಸುತ್ತಲೇ ಇರಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ವೆಲ್ಕಮ್ ಟು ದಿ ಜಂಗಲ್' ಬಿಡುಗಡೆಗೆ ಸಜ್ಜಾಗಿದ್ದು, ಇದರಲ್ಲಿ ರವೀನಾ ಟಂಡನ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

