
ಸೈಯಾರಾ ಚಿತ್ರದ ನಂತರ ಮೋಹಿತ್ ಸೂರಿ ಮುಂದಿನ ಸಿನಿಮಾ
Saiyaara| ಸೈಯಾರಾ ಸಕ್ಸಸ್ ಬೆನ್ನಲ್ಲೇ ಮತ್ತೆ ಒಂದಾದ ಅಹಾನ್-ಅನೀತ್; ಹೊಸ ಸಿನಿಮಾ ಘೋಷಣೆ
ಸೈಯಾರಾ ಚಿತ್ರದ ಯಶಸ್ಸಿನ ಬಳಿಕ ಮೋಹಿತ್ ಸೂರಿ, ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ಯಶ್ ರಾಜ್ ಫಿಲ್ಮ್ಸ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ.
ಬಾಲಿವುಡ್‌ನ ಯಶಸ್ವಿ ಚಿತ್ರ 'ಸೈಯಾರಾ' ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಜೋಡಿ ಈಗ ಮತ್ತೆ ಬೆಳ್ಳಿಪರದೆಯ ಮೇಲೆ ಒಂದಾಗಲು ಸಜ್ಜಾಗಿದೆ. ನಿರ್ದೇಶಕ ಮೋಹಿತ್ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ನೂತನ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಅಕ್ಷಯ್ ವಿಧಾನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಒಬ್ಬ ಉದಯೋನ್ಮುಖ ಗಾಯಕ ಮತ್ತು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ಗೀತರಚನೆಗಾರ್ತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಹೊಂದಿದ್ದ 'ಸೈಯಾರಾ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಭಾರತದಲ್ಲಿ 338 ಕೋಟಿ ರೂಪಾಯಿ ಹಾಗೂ ಜಾಗತಿಕವಾಗಿ 500 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸುವ ಮೂಲಕ ಈ ಚಿತ್ರ ಇತಿಹಾಸ ಸೃಷ್ಟಿಸಿತ್ತು. ಇದೀಗ ಅದೇ ಯಶಸ್ವಿ ತಂಡ ಮತ್ತೊಂದು ಪ್ರೇಮಕಥೆಯ ಮೂಲಕ ಬರಲಿದ್ದು, ಚಿತ್ರದ ಶೀರ್ಷಿಕೆಯನ್ನು ಇನ್ನು ಅಂತಿಮಗೊಳಿಸಲಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಮೋಹಿತ್ ಸೂರಿ, ತಮಗೆ ಪ್ರೇಮಕಥೆಗಳೆಂದರೆ ಮೊದಲಿನಿಂದಲೂ ಅಚ್ಚುಮೆಚ್ಚು . ಸೈಯಾರಾ ತಂಡದೊಂದಿಗೆ ಮತ್ತೆ ಕೆಲಸ ಮಾಡುವುದು ಮನೆಗೆ ಮರಳಿದಂತಿದೆ. ಈ ಚಿತ್ರದಲ್ಲಿ ಹೊಸಬನಂತೆ ಕೆಲಸ ಮಾಡುವ ಹಸಿವು ನನ್ನಲ್ಲಿದೆ ಮತ್ತು ಸಂಗೀತದ ಮೂಲಕ ಮತ್ತೊಮ್ಮೆ ಜನರ ಹೃದಯ ಮುಟ್ಟುವ ಆಸೆ ಇದೆ ಎಂದಿದ್ದಾರೆ.
ವೈಆರ್‌ಎಫ್ ಸಿಇಒ ಅಕ್ಷಯ್ ವಿಧಾನಿ ಮಾತನಾಡಿ, ಮೋಹಿತ್ ಸೂರಿ ಅವರೊಂದಿಗೆ ಕೆಲಸ ಮಾಡುವುದು ಕೇವಲ ಸಿನಿಮಾ ಮಾಡುವುದಲ್ಲ, ಅದೊಂದು ಸುಂದರ ಅನುಭವವನ್ನು ಸೃಷ್ಟಿಸಿದಂತೆ ಎಂದು ಬಣ್ಣಿಸಿದ್ದಾರೆ. ಸೈಯಾರಾ ಚಿತ್ರದ ಮೂಲಕ ದೇಶದ ನೆಚ್ಚಿನ 'ಜೆನ್ ಜಿ' ಜೋಡಿಯಾಗಿ ಹೊರಹೊಮ್ಮಿರುವ ಅಹಾನ್ ಮತ್ತು ಅನೀತ್ ಅವರನ್ನು ಮತ್ತೆ ಒಟ್ಟಾಗಿ ತೆರೆಯ ಮೇಲೆ ತರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, 2027ರಲ್ಲಿ ಚಿತ್ರ ಜಾಗತಿಕವಾಗಿ ತೆರೆಕಾಣಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

