
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸುವ ಕೋರ್ಟ್ ಹಾಗೂ ಜಡ್ಜ್ ಬದಲಾವಣೆಯಾಗಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಕೇಸ್‌ನಲ್ಲಿ ಬೇರೆ ಕೋರ್ಟ್‌ಗೆ ವರ್ಗ
ನಟ ದರ್ಶನ್ ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ಜೂನ್ ಒಂದರಿಂದ ಹೊಸದಾಗಿ ನಿಯೋಜನೆಗೊಂಡಿರುವ 59ನೇ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆಯಾಗಲಿದ್ದು, ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಇದರ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ನಟ ದರ್ಶನ್ ಮತ್ತು ಇತರರು ಆರೋಪಿಗಳಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ, ಪ್ರಕರಣದ ವಿಚಾರಣೆಯನ್ನು ನಡೆಸುವ ನ್ಯಾಯಾಲಯ ಮತ್ತು ನ್ಯಾಯಾಧೀಶರು ಬದಲಾಗಿದ್ದಾರೆ.
ಸಿಟಿ ಸಿವಿಲ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಸೆಷನ್ಸ್ ಕೋರ್ಟ್‌ಗಳಿಗೆ ಪೊಲೀಸ್ ಸ್ಟೇಷನ್ ವಾರು ಸಬ್ ಡಿವಿಜನ್‌ಗಳನ್ನು ಹೊಸದಾಗಿ ಹಂಚಿಕೆ ಮಾಡಲಾಗಿದೆ. ಈ ನೂತನ ನಿಯೋಜನೆಯನ್ವಯ ವಿಜಯನಗರ ಸಬ್ ಡಿವಿಜನ್ ವ್ಯಾಪ್ತಿಯನ್ನು 59ನೇ ಸೆಷನ್ಸ್ ಕೋರ್ಟ್‌ಗೆ ಒಪ್ಪಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದಾಖಲಾಗಿರುವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯು ಈ ವ್ಯಾಪ್ತಿಗೆ ಬರುವುದರಿಂದ, ಇನ್ಮುಂದೆ ಈ ಪ್ರಕರಣದ ಸಂಪೂರ್ಣ ವಿಚಾರಣೆ 59ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಲಿದೆ.
ಜೂನ್ ಒಂದರಿಂದ ಈ ಹೊಸ ನಿಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದ್ದು, ಅಂದಿನಿಂದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಹೈಪ್ರೊಫೈಲ್ ಪ್ರಕರಣದ ಜವಾಬ್ದಾರಿಯನ್ನು ವಹಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ. ಇದುವರೆಗೆ ಈ ಪ್ರಕರಣದ ವಿಚಾರಣೆಯು ಇಂಚಾರ್ಜ್ ಕೋರ್ಟ್ ಆಗಿದ್ದ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಆದರೆ ಜೂನ್ 1ರಿಂದ 59ನೇ ಸೆಷನ್ಸ್ ಕೋರ್ಟ್‌ನಲ್ಲಿಯೇ ಪ್ರಕರಣದ ಮುಖ್ಯ ಟ್ರಯಲ್ ಹಾಗೂ ಸಾಕ್ಷಿಗಳ ವಿಚಾರಣೆಗಳು ಮುಂದುವರಿಯಲಿವೆ. ನ್ಯಾಯಾಲಯ ಮತ್ತು ನ್ಯಾಯಾಧೀಶರ ಈ ಬದಲಾವಣೆಯು ದರ್ಶನ್ ಪ್ರಕರಣದ ಕಾನೂನು ಪ್ರಕ್ರಿಯೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.
ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ಆದೇಶದ ಪ್ರಕಾರ, ಈ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕಿದೆ. ಅದರಲ್ಲೂ ಪ್ರಮುಖವಾಗಿರುವ 60 ಸಾಕ್ಷಿಗಳ ವಿಚಾರಣೆಯನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಮತ್ತು ಆರೋಪಿಗಳಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ಕೋರ್ಟ್‌ನಲ್ಲಿ ದರ್ಶನ್ ಪ್ರಕರಣದ ವಿಚಾರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಪ್ರತಿದಿನ ನಿರಂತರವಾಗಿ ವಿಚಾರಣೆ ನಡೆಸುವ (ಡೈಲಿ ಟ್ರಯಲ್) ಕುರಿತು ಸೆಷನ್ಸ್ ಕೋರ್ಟ್‌ನಲ್ಲಿ ಇಂದು ನಡೆಯಲಿರುವ ಪ್ರಕ್ರಿಯೆಯಲ್ಲಿ ಮತ್ತಷ್ಟು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

