
ಆಮೀರ್ ಖಾನ್ ಜುಲೈ 5 ರಂದು ಮುಂಬೈನ ತಮ್ಮ ನಿವಾಸದಲ್ಲಿ ಗೆಳತಿ ಗೌರಿ ಸ್ಪ್ರಾಟ್ ಜೊತೆ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೋಂದಣಿ ವಿವಾಹವಾಗಲಿದೆ.
ಜುಲೈ 5ಕ್ಕೆ ಆಮಿರ್ ಖಾನ್-ಗೌರಿ ಸ್ಪ್ರಾಟ್ ರಿಜಿಸ್ಟರ್ ಮ್ಯಾರೇಜ್
ನಟ ಆಮಿರ್ ಖಾನ್ ಜುಲೈ 5 ರಂದು ಮುಂಬೈನ ತಮ್ಮ ನಿವಾಸದಲ್ಲಿ ಗೆಳತಿ ಗೌರಿ ಸ್ಪ್ರಾಟ್ ಜೊತೆ ಆಪ್ತರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ವಿವಾಹವಾಗಲಿದ್ದು, ಯಾವುದೇ ಆರತಕ್ಷತೆ ಇರುವುದಿಲ್ಲ.
ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆಗೆ ಜುಲೈ 5 ರಂದು ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇತ್ತೀಚೆಗಷ್ಟೇ ಆಮಿರ್ ಖಾನ್ ಪ್ರೊಡಕ್ಷನ್ಸ್‌ನ 25ನೇ ವರ್ಷದ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಆಚರಿಸಿದ್ದ ನಟ, ತಮ್ಮ ಮದುವೆಯನ್ನು ಮಾತ್ರ ಅತ್ಯಂತ ಸರಳವಾಗಿ ಮತ್ತು ಆಪ್ತರ ಸಮ್ಮುಖದಲ್ಲಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಚಿತ್ರರಂಗದ ಗಣ್ಯರಿಗಾಗಿ ಯಾವುದೇ ಭವ್ಯವಾದ ರಿಸೆಪ್ಷನ್ ಅಥವಾ ಆರತಕ್ಷತೆ ಕಾರ್ಯಕ್ರಮ ಇರುವುದಿಲ್ಲ ಎಂದು ತಿಳಿದುಬಂದಿದೆ.
ಆಮಿರ್ ಖಾನ್ ಮನೆಯಲ್ಲೇ ಸರಳ ವಿವಾಹ
ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಖಾನ್ ಅವರ ನಿವಾಸದಲ್ಲಿಯೇ ಮದುವೆ ನೋಂದಣಿ (ರಿಜಿಸ್ಟರ್ ಮ್ಯಾರೇಜ್) ನಡೆಯಲಿದ್ದು, ಜುಲೈ 5 ರಂದು ದಿನದ ಮೊದಲಾರ್ಧದಲ್ಲಿ ಸರಳ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಈ ಸುಂದರ ಕ್ಷಣಕ್ಕೆ ಕೇವಲ ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಮದುವೆಯ ಮತ್ತೊಂದು ವಿಶೇಷವೆಂದರೆ, ಇಬ್ಬರ ಹಿಂದಿನ ದಾಂಪತ್ಯದ ನಾಲ್ಕೂ ಮಕ್ಕಳು ಈ ವಿವಾಹ ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ.
ಆಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಐರಾ ಖಾನ್, ಎರಡನೇ ಪತ್ನಿ ಕಿರಣ್ ರಾವ್ ಅವರ ಮಗ ಆಜಾದ್ ರಾವ್ ಖಾನ್ ಹಾಗೂ ಗೌರಿ ಅವರ ಹಿಂದಿನ ಮದುವೆಯ ಮಗ ಈ ಸರಳ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.
ಬೆಂಗಳೂರು ಮೂಲದ ಗೌರಿ
ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಮತ್ತು ಆಮಿರ್ ಖಾನ್ ಅವರ ಪರಿಚಯ ಆಮೀರ್ ಅವರ ಸೋದರಸಂಬಂಧಿ ನುಜಹತ್ ಖಾನ್ ಮೂಲಕ ಬೆಂಗಳೂರಿನಲ್ಲಿ ಆಗಿತ್ತು. ಸುಮಾರು ಒಂದು ವರ್ಷದ ಡೇಟಿಂಗ್ ಬಳಿಕ, ಕಳೆದ ವರ್ಷ ಮಾರ್ಚ್‌ನಲ್ಲಿ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿಯನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದರು.
ಪ್ರಸ್ತುತ ಇಬ್ಬರೂ ಬಾಂದ್ರಾ ನಿವಾಸದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಹೇರ್ ಕೇರ್ ಬ್ರ್ಯಾಂಡ್ ಒಂದರಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಗೌರಿ, ಈಗ ಮುಂಬೈನಲ್ಲಿ ಆಮಿರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ನನಗೆ ಶೋಭೆ ತರುವುದಿಲ್ಲ ಎಂದು ಈ ಹಿಂದೆ ಆಮಿರ್ ತಮಾಷೆ ಮಾಡಿದ್ದರಾದರೂ, ಗೌರಿ ಜೊತೆಗಿನ ಜೀವನ ತಮಗೆ ನೆಮ್ಮದಿ ತಂದಿದೆ ಎಂದು ಒಪ್ಪಿಕೊಂಡಿದ್ದಾರೆ.

