
'ಶೋಲೆ' ಚಿತ್ರಕ್ಕೆ ಹೋಲಿಸಿ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಸೋಲಿನ ಅಸಲಿ ರಹಸ್ಯ ಬಿಚ್ಚಿಟ್ಟ ನಟ ಆಮೀರ್ ಖಾನ್.
Aamir Khan| 'ಶೋಲೆ' ಚಿತ್ರಕ್ಕೆ ಹೋಲಿಸಿ 'ಥಗ್ಸ್' ಸೋಲಿನ ರಹಸ್ಯ ಬಿಚ್ಚಿಟ್ಟ ಆಮೀರ್ ಖಾನ್
ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಸೋಲಿಗೆ ಚಿತ್ರಕಥೆ ಬದಲಾವಣೆ ಕಾರಣ ಎಂದು ಶೋಲೆ ಚಿತ್ರಕ್ಕೆ ಹೋಲಿಸಿ ಆಮೀರ್ ಖಾನ್ ಸತ್ಯ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಆಮೀರ್ ಖಾನ್ ಅವರು ಚಿತ್ರಕಥೆಗಿಂತ ಪಾತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ತಾವೇ ಒಪ್ಪಿಕೊಂಡಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಯಾಕೆ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟವಾಯಿತು ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಸ್ಕ್ರೀನ್ ಅಕಾಡೆಮಿ ಮಾಸ್ಟರ್‌ಕ್ಲಾಸ್‌ನಲ್ಲಿ ಭಾಗವಹಿಸಿದ್ದ ಅವರು, ತಮ್ಮ ಸಿನಿಮೀಯ ಪಯಣದಲ್ಲಿ ಕಥೆಗೆ ಮೊದಲ ಆದ್ಯತೆ ನೀಡುತ್ತ ಬಂದಿರುವುದಾಗಿ ತಿಳಿಸಿದರು. ದಂಗಲ್ ಚಿತ್ರದ ಉದಾಹರಣೆ ನೀಡಿದ ಅವರು, ತಮಗೆ ಕಥೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುವುದಾಗಿ ಮತ್ತು ಪಾತ್ರಕ್ಕೆ ಯಾವಾಗಲೂ ಎರಡನೇ ಆದ್ಯತೆ ನೀಡುವುದಾಗಿ ಹೇಳಿದರು. ಆದರೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕೇವಲ ಒಂದೇ ಒಂದು ಬಾರಿ ಕಥೆಗಿಂತ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಗಿ ಮತ್ತು ಆ ನಿರ್ಧಾರ ತಮಗೆ ಅತ್ಯಂತ ಕೆಟ್ಟದಾಗಿ ತಿರುಗುಬಾಣವಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ.
ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 2018ರ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಸೋಲನ್ನು ವಿಶ್ಲೇಷಿಸಿದ ಆಮೀರ್ ಖಾನ್, ಈ ಚಿತ್ರದ ಕಥಾ ಹಂದರವನ್ನು ರಮೇಶ್ ಸಿಪ್ಪಿ ಅವರ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ 'ಶೋಲೆ' ಚಿತ್ರಕ್ಕೆ ಹೋಲಿಸಿದ್ದಾರೆ. ಶೋಲೆ ಚಿತ್ರದಲ್ಲಿ ಸಂಜೀವ್ ಕುಮಾರ್ ನಿರ್ವಹಿಸಿದ ಠಾಕೂರ್ ಪಾತ್ರವು ತನ್ನ ಕುಟುಂಬದ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಬಯಸುತ್ತದೆ ಮತ್ತು ಅದಕ್ಕೆ ಸಹಾಯ ಮಾಡಲು ಜೈ ಹಾಗೂ ವೀರು ಎಂಬ ಇಬ್ಬರು ನಾಯಕರು ಬರುತ್ತಾರೆ. ಅದೇ ಮಾದರಿಯಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ನಟಿಸಿದ ಜಫೀರಾ ಎಂಬ ಪಾತ್ರದ ಕುಟುಂಬ ಸರ್ವನಾಶವಾಗಿರುತ್ತದೆ ಮತ್ತು ಅವಳಿಗೆ ಸಹಾಯ ಮಾಡಲು ಫಿರಂಗಿ ಎಂಬ ಪಾತ್ರದ ಮೂಲಕ ಆಮೀರ್ ಖಾನ್ ಪ್ರವೇಶಿಸುತ್ತಾರೆ. ಶೋಲೆ ಚಿತ್ರದಲ್ಲಿ ಜೈ ಮತ್ತು ವೀರು ನಾಯಕರಾಗಿದ್ದರೂ ಅದು ಮೂಲತಃ ಠಾಕೂರ್‌ನ ಕಥೆಯಾಗಿದ್ದಂತೆ, ಇಲ್ಲಿಯೂ ಕೂಡ ಇದು ಫಿರಂಗಿಯ ಕಥೆಯಾಗಿರದೆ ಜಫೀರಾಳ ಕಥೆಯಾಗಿತ್ತು ಎಂದು ಆಮೀರ್ ವಿವರಿಸಿದ್ದಾರೆ.
ಆಮೀರ್ ಬೇಸರ
ಚಿತ್ರದ ಸೋಲಿಗೆ ಪ್ರಮುಖ ಕಾರಣ ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರಕಥೆಗೆ ತಂದ ಬದಲಾವಣೆಗಳು ಎಂದು ಆಮೀರ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ತಾರಾಗಣದ ಆಯ್ಕೆಯ ಕಾರಣಗಳಿಗಾಗಿ ಮೂಲ ಚಿತ್ರಕಥೆಯನ್ನು ಪದೇ ಪದೇ ಬದಲಾಯಿಸಲಾಯಿತು. ಈ ಮೂಲಕ ತಾವೊಂದು ಮೂಲಭೂತ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡ ಆಮೀರ್, ಸೂಕ್ತ ತಾರಾಗಣ ಸಿಗದಿದ್ದರೂ ಸಹ ಯಾವುದೇ ಕಾರಣಕ್ಕೂ ಮೂಲ ಚಿತ್ರಕಥೆಯನ್ನು ಬದಲಾಯಿಸಬಾರದಿತ್ತು ಎಂದಿದ್ದಾರೆ. ಹೀಗಾಗಿ ಪ್ರೇಕ್ಷಕರು ಪರದೆಯ ಮೇಲೆ ನೋಡಿದ 'ಥಗ್ಸ್' ಚಿತ್ರವು ನಿರ್ದೇಶಕ ವಿಕ್ಟರ್ ಬರೆದ ಮೂಲ ಕಥೆಯಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಚಿತ್ರದ ಕಥೆ ತಮಗೆ ಸಾಧಾರಣ ಎನಿಸಿದರೂ, ತಾವು ನಿರ್ವಹಿಸಿದ 'ಫಿರಂಗಿ' ಎಂಬ ಪಾತ್ರ ಅತ್ಯಂತ ಆಕರ್ಷಕವಾಗಿತ್ತು ಎಂದು ಆಮೀರ್ ತಿಳಿಸಿದ್ದಾರೆ. ಫಿರಂಗಿ ಎಂಬವನು ಯಾವಾಗ ನಿಜ ಹೇಳುತ್ತಾನೆ, ಯಾವಾಗ ಸುಳ್ಳು ಹೇಳುತ್ತಾನೆ ಎಂದು ತಿಳಿಯದ ನಂಬಿಕೆಗೆ ಅರ್ಹನಲ್ಲದ ಮತ್ತು ಕೇವಲ ತನ್ನ ಸ್ವಾರ್ಥವನ್ನಷ್ಟೇ ನೋಡುವ ವಿಭಿನ್ನ ಪಾತ್ರವಾಗಿದ್ದರಿಂದ ತಾವು ಆ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳಿದರು. ಆದರೆ ಸಿನಿಮಾ ಸಿದ್ಧವಾದಾಗ ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ನಿರ್ದೇಶಕರಿಗೆ ಅದು ಇಷ್ಟವಾದರೂ, ತಮಗೆ ಮಾತ್ರ ಚಿತ್ರದ ಔಟ್‌ಪುಟ್ ಸ್ವಲ್ಪವೂ ಇಷ್ಟವಾಗಿರಲಿಲ್ಲ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ. ಚಿತ್ರದ ಬರವಣಿಗೆಯ ವಿನ್ಯಾಸದಲ್ಲೇ ದೋಷವಿದೆ ಎಂದು ತಮಗೆ ಅನಿಸಿದ್ದರಿಂದ ಸುಮಾರು ಎಂಟು ತಿಂಗಳ ಕಾಲ ಈ ಕುರಿತು ಅವರೊಂದಿಗೆ ಚರ್ಚಿಸಿದ್ದಾಗಿಯೂ, ಆದರೆ ಅಂತಿಮವಾಗಿ ನಿರ್ದೇಶಕ ಹಾಗೂ ನಿರ್ಮಾಪಕರ ನಿರ್ಧಾರಕ್ಕೆ ಗೌರವ ನೀಡಿ ಒಪ್ಪಿಕೊಂಡಿದ್ದಾಗಿಯೂ ಅವರು ಹೇಳಿದ್ದಾರೆ. ತಮಗೇ ಇಷ್ಟವಾಗದ ಸಿನಿಮಾ ಪ್ರೇಕ್ಷಕರಿಗೆ ಹೇಗೆ ಇಷ್ಟವಾಗಲು ಸಾಧ್ಯ ಎಂದು ಪ್ರಶ್ನಿಸಿದ ಆಮೀರ್, ಸಿನಿಮಾ ಸೋತಾಗ ತಮಗೇನೂ ಬೇಸರವಾಗಲಿಲ್ಲ ಎಂದು ನುಡಿದಿದ್ದಾರೆ.

