ಆಮೀರ್‌ ಖಾನ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ
x

ಆಮೀರ್‌ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.

ಆಮೀರ್‌ ಖಾನ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ

ಗೌರಿ ಸ್ಪ್ರ್ಯಾಟ್ ಜೊತೆಗಿನ ಮೂರನೇ ಮದುವೆಯ ಬೆನ್ನಲ್ಲೇ ಬಾಲಿವುಡ್ ನಟ ಆಮೀರ್‌ ಖಾನ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದಿದ್ದು, ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Click the Play button to hear this message in audio format

ಬಾಲಿವುಡ್ ನಟ ಸಲ್ಮಾನ್ ಖಾನ್ ನಂತರ, ಈಗ ಮತ್ತೊಬ್ಬ ಸ್ಟಾರ್ ನಟ ಆಮೀರ್‌ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಉದ್ಯಮಿ ಮತ್ತು ಫ್ಯಾಶನ್ ಸ್ಟೈಲಿಸ್ಟ್ ಗೌರಿ ಸ್ಪ್ರ್ಯಾಟ್ ಅವರನ್ನು ಆಮೀರ್‌ ಖಾನ್ ಮೂರನೇ ಮದುವೆಯಾಗಿದ್ದರು. ಈ ವಿವಾಹದ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಗೂ ಆಡಿಯೋ ಕ್ಲಿಪ್ ಮೂಲಕ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರೆನ್ನಲಾದ ಆರ್ಜೂ ಬಿಷ್ಣೋಯಿ ಮತ್ತು ಟೈಸನ್ ಬಿಷ್ಣೋಯಿ ಎಂಬುವವರ ಹೆಸರುಗಳು ಉಲ್ಲೇಖವಾಗಿವೆ. ಆಮಿರ್ ಖಾನ್ ಅವರ ಮೂರನೇ ಮದುವೆಯನ್ನು 'ಲವ್ ಜಿಹಾದ್' ಎಂದು ಕರೆದಿರುವ ಗ್ಯಾಂಗ್, ಆಮೀರ್‌ ಖಾನ್ ಸಂಸ್ಕೃತಿಗೆ ವಿರುದ್ಧವಾದ ಇಂತಹ ಕೃತ್ಯಗಳನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಇದನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸನಾತನ ಧರ್ಮಕ್ಕೆ ವಿರುದ್ಧವಾಗಿ ನಡೆಯುವವರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಡಿಯೋ ಸಂದೇಶದಲ್ಲಿ ಹೇಳಲಾಗಿದೆ.

ತನಿಖೆ ಆರಂಭಿಸಿದ ಮುಂಬೈ ಪೊಲೀಸರು

ಈ ಬೆದರಿಕೆ ಸಂದೇಶಗಳು ವೈರಲ್ ಆಗುತ್ತಿದ್ದಂತೆ ಮುಂಬೈ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಮುಂಬೈ ಕ್ರೈಮ್ ಬ್ರಾಂಚ್ ಮತ್ತು ಸೈಬರ್ ಸೆಲ್ ವಿಭಾಗಗಳು ಈ ಫೇಸ್‌ಬುಕ್ ಪೋಸ್ಟ್ ಹಾಗೂ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿವೆ. ಈ ಸಂದೇಶಗಳು ನಿಜವಾಗಿಯೂ ಬಿಷ್ಣೋಯಿ ಗ್ಯಾಂಗ್‌ನಿಂದ ಬಂದಿವೆಯೇ ಅಥವಾ ಯಾರಾದರೂ ಕಿಡಿಗೇಡಿಗಳು ಮಾಡಿರುವ ಕೃತ್ಯವೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಭದ್ರತೆ ಪರಿಶೀಲನೆ, ದಾಖಲಾಗಿಲ್ಲ ಎಫ್‌ಐಆರ್

ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಬಾಂದ್ರಾದಲ್ಲಿರುವ ಆಮೀರ್‌ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಆದರೆ, ಆಮಿರ್ ಖಾನ್ ಅಥವಾ ಅವರ ತಂಡದ ಕಡೆಯಿಂದ ಈವರೆಗೆ ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜುಲೈ 5 ರಂದು ಮುಂಬೈನಲ್ಲಿ ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ವಿವಾಹ ಅತ್ಯಂತ ಖಾಸಗಿಯಾಗಿ ನಡೆದಿತ್ತು.

Read More
Next Story