3 ಇಡಿಯಟ್ಸ್ 2 ಕಥೆ ಬಿಚ್ಚಿಟ್ಟ ರಾಜಕುಮಾರ್ ಹಿರಾನಿ
x

 '3 ಇಡಿಯಟ್ಸ್' ಸೀಕ್ವೆಲ್ ಕಥೆ ಕಾಲೇಜು ಜೀವನದ್ದಲ್ಲ

'3 ಇಡಿಯಟ್ಸ್ 2' ಕಥೆ ಬಿಚ್ಚಿಟ್ಟ ರಾಜಕುಮಾರ್ ಹಿರಾನಿ

3 ಇಡಿಯಟ್ಸ್' ಸೀಕ್ವೆಲ್ ಕಥೆ ಕಾಲೇಜು ಜೀವನದ್ದಲ್ಲ! ರಾಂಚೋ, ಫರ್ಹಾನ್, ರಾಜು ಅವರ ಮಧ್ಯವಯಸ್ಸಿನ ಬಿಕ್ಕಟ್ಟುಗಳ ಸುತ್ತ ಹೊಸ ಚಿತ್ರ ಮೂಡಿಬರಲಿದೆ ಎಂದ ಹಿರಾನಿ.


Click the Play button to hear this message in audio format

ಬಾಲಿವುಡ್‌ನ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಂದಾದ '3 ಇಡಿಯಟ್ಸ್' ಚಿತ್ರದ ಸೀಕ್ವೆಲ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಅದೆಷ್ಟೋ ಊಹಾಪೋಹಗಳಿಗೆ ಈಗ ಸ್ವತಃ ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿ ಅವರೇ ತೆರೆ ಎಳೆದಿದ್ದಾರೆ. ಚಿತ್ರದ ಕಥೆ ಹೇಗೆ ಮುಂದುವರಿಯಲಿದೆ ಮತ್ತು ಈ ಬಾರಿ ಪ್ರೇಕ್ಷಕರಿಗೆ ಏನು ಹೊಸತು ಕಾದಿದೆ ಎಂಬ ಕುತೂಹಲಕಾರಿ ವಿಷಯಗಳನ್ನು ಅವರು ಬಹಿರಂಗಪಡಿಸಿದ್ದಾರೆ.

ಈ ಬಾರಿ ಚಿತ್ರದಲ್ಲಿ ಯಾವುದೇ ಕಾಲೇಜು ಜೀವನದ ಕಥೆ ಇರುವುದಿಲ್ಲ ಎಂದು ರಾಜಕುಮಾರ್ ಹಿರಾನಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಇನ್ನೂ ಬಾಕಿ ಇವೆ. ಮೊದಲ ಭಾಗ ಬಿಡುಗಡೆಯಾಗಿ 15 ರಿಂದ 20 ವರ್ಷಗಳ ನಂತರ ರಾಂಚೋ, ಫರ್ಹಾನ್ ಮತ್ತು ರಾಜು ಅವರ ಜೀವನ ಯಾವ ತಿರುವು ಪಡೆದಿದೆ ಎಂಬುದನ್ನು ಈ ಚಿತ್ರದಲ್ಲಿ ಮುಖ್ಯವಾಗಿ ತೋರಿಸಲಾಗುತ್ತದೆ. ಈಗ ಅವರೆಲ್ಲರಿಗೂ ಮದುವೆಯಾಗಿ ಮಕ್ಕಳಾಗಿರುವುದರಿಂದ, ಚಿತ್ರದ ಕಥೆ ಕಾಲೇಜು ಜೀವನದ ಬಗ್ಗೆ ಇರದೆ, ಅವರ ಮಧ್ಯವಯಸ್ಸಿನ ಬಿಕ್ಕಟ್ಟುಗಳ ಸುತ್ತ ಸುತ್ತುತ್ತದೆ ಎಂದು ಹೇಳಿದ್ದಾರೆ.

ಮೊದಲ ಭಾಗದಲ್ಲಿ ಯಶಸ್ಸಿನ ಹಿಂದೆ ಓಡುವುದಕ್ಕಿಂತ ನಮ್ಮ ಪ್ಯಾಶನ್ ಹಿಂಬಾಲಿಸಬೇಕು ಎಂಬ ದೊಡ್ಡ ಸಂದೇಶವಿದ್ದಂತೆ, ಈ ಸೀಕ್ವೆಲ್‌ನಲ್ಲೂ ಪ್ರೇಕ್ಷಕರಿಗೆ ಒಂದು ಅದ್ಭುತವಾದ ಸಂದೇಶ ಕಾದಿದೆ. ಕಥೆಯು ಪ್ರೇಕ್ಷಕರು ಎಂದಿಗೂ ಊಹಿಸದ ರೀತಿಯಲ್ಲಿ ಮೂಡಿಬರಲಿದ್ದು, ಮೊದಲ ಭಾಗದಲ್ಲಿದ್ದ ಅದೇ ಹಾಸ್ಯ ಮತ್ತು ಮನರಂಜನೆ ಇದರಲ್ಲೂ ಮುಂದುವರಿಯಲಿದೆ ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.

ನಟ ಆಮಿರ್ ಖಾನ್ ಕೂಡ ಈ ಸುದ್ದಿಯನ್ನು ಖಚಿತಪಡಿಸಿದ್ದು, ತಮಗೆ ಕಥೆಯ ಸಾರಾಂಶವನ್ನು ಹೇಳಲಾಗಿದೆ ಮತ್ತು ಕಥೆ ತುಂಬಾ ವಿಭಿನ್ನವಾಗಿ ಮೂಡಿಬಂದಿದೆ ಎಂದು ತಿಳಿಸಿದ್ದಾರೆ. ತಾವು ಮತ್ತೊಮ್ಮೆ 'ಫುನ್ಸುಖ್ ವಾಂಗ್ಡು' ಅಲಿಯಾಸ್ ರಾಂಚೋ ಪಾತ್ರದಲ್ಲಿ ನಟಿಸಲು ಅತ್ಯಂತ ಉತ್ಸುಕರಾಗಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್ ಜೊತೆಗೆ ಆರ್. ಮಾಧವನ್, ಶರ್ಮನ್ ಜೋಶಿ ಮತ್ತು ಕರೀನಾ ಕಪೂರ್ ಖಾನ್ ಮತ್ತೊಮ್ಮೆ ಜೊತೆಯಾಗುವ ನಿರೀಕ್ಷೆಯಿದೆ. ಚಿತ್ರಕಥೆಯ ಕೆಲಸಗಳು ಸಂಪೂರ್ಣವಾಗಿ ಮುಗಿದ ತಕ್ಷಣವೇ ಸಿನಿಮಾ ಸೆಟ್ಟೇರಲಿದೆ.

Read More
Next Story