
ಆಮೀರ್ ಖಾನ್ ಅವರ ಈ ಹೇಳಿಕೆಯನ್ನು ಸುಳ್ಳು ಎಂದು ಬಿಂಬಿಸುವಂತಹ 2008ರ ಹಳೆಯ ವಿಡಿಯೋ ಒಂದನ್ನು ನೆಟ್ಟಿಗರು ಇದೀಗ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಸೋನಮ್ ವಾಂಗ್‌ಚುಕ್ ಗೊತ್ತೇ ಇಲ್ಲ; ಆಮೀರ್ ಖಾನ್ ಸುಳ್ಳು ಹೇಳಿದ್ರಾ? ವಿಡಿಯೋ ಸಾಕ್ಷಿ ತಂದ ನೆಟ್ಟಿಗರು
'3 ಇಡಿಯಟ್ಸ್' ಚಿತ್ರಕ್ಕೂ ಮುನ್ನ ಸೋನಮ್ ವಾಂಗ್‌ಚುಕ್ ಪರಿಚಯವಿರಲಿಲ್ಲ ಎಂದಿದ್ದ ಆಮೀರ್ ಖಾನ್ ಹೇಳಿಕೆ ಸುಳ್ಳೆಂದು ಸಾಬೀತುಪಡಿಸುವ 2008ರ ಹಳೆಯ ವಿಡಿಯೋವನ್ನು ನೆಟ್ಟಿಗರು ವೈರಲ್ ಮಾಡಿದ್ದಾರೆ.
ಬಾಲಿವುಡ್‌ನ ಸೂಪರ್‌ಹಿಟ್ ಸಿನಿಮಾ '3 ಇಡಿಯಟ್ಸ್' ಚಿತ್ರದ ' ರಾಂಚೋ ಪಾತ್ರದ ಕುರಿತು ನಟ ಆಮೀರ್ ಖಾನ್ ನೀಡಿದ್ದ ಇತ್ತೀಚಿನ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಲಡಾಖ್‌ನ ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಅವರ ಹೋರಾಟದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಮೀರ್ ಖಾನ್, '3 ಇಡಿಯಟ್ಸ್' ಚಿತ್ರದ ತಮ್ಮ ರಾಂಚೋ ಪಾತ್ರಕ್ಕೂ ಸೋನಮ್ ವಾಂಗ್‌ಚುಕ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, 2009ರಲ್ಲಿ ಸಿನಿಮಾ ಬಿಡುಗಡೆಯಾಗುವ ಮುನ್ನ ತನಗಾಗಲಿ ಅಥವಾ ಚಿತ್ರದ ಕಥೆಗಾರರಿಗಾಗಲಿ ಸೋನಮ್ ವಾಂಗ್‌ಚುಕ್ ಯಾರೆಂದೇ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಆಮೀರ್ ಖಾನ್ ಅವರ ಈ ಹೇಳಿಕೆಯನ್ನು ಸುಳ್ಳು ಎಂದು ಬಿಂಬಿಸುವಂತಹ 2008ರ ಹಳೆಯ ವಿಡಿಯೋ ಒಂದನ್ನು ನೆಟ್ಟಿಗರು ಇದೀಗ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸೋನಮ್ ವಾಂಗ್‌ಚುಕ್ ಅವರ ಟೆಡ್ ಟಾಕ್ ವಿಡಿಯೋ ಒಂದರ ತುಣುಕು ಇದಾಗಿದ್ದು, ಅದರಲ್ಲಿ 2008ರಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಗಳಿವೆ. ಸೋನಮ್ ಅವರು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ 'ರಿಯಲ್ ಹೀರೋಸ್' ಪ್ರಶಸ್ತಿ ಸ್ವೀಕರಿಸುತ್ತಿದ್ದಾಗ, ಪ್ರೇಕ್ಷಕರ ಸಾಲಿನಲ್ಲಿ ಆಮೀರ್ ಖಾನ್ ಮತ್ತು ಅವರ ಅಂದಿನ ಪತ್ನಿ ಕಿರಣ್ ರಾವ್ ಕುಳಿತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ, ಅಂದು ವೇದಿಕೆಯಲ್ಲಿ ಮಾತನಾಡಿದ್ದ ಸೋನಮ್ ವಾಂಗ್‌ಚುಕ್ ಅವರು ಆಮೀರ್ ಖಾನ್ ಅವರ 'ತಾರೆ ಜಮೀನ್ ಪರ್' ಚಿತ್ರವನ್ನು ಶ್ಲಾಘಿಸಿ, ಗಡಿ ಭಾಗದ ಶಿಕ್ಷಣದ ಕುರಿತು ಸಿನಿಮಾ ಮಾಡುವಂತೆ ಆಮೀರ್‌ಗೆ ಸಲಹೆ ನೀಡಿದ್ದರು. ಈ ವೇಳೆ ಆಮೀರ್ ಖಾನ್ ಅವರು ನಸುನಗುತ್ತಾ ತಲೆಯಾಡಿಸಿದ್ದ ದೃಶ್ಯವೂ ವಿಡಿಯೋದಲ್ಲಿದೆ.
ಸಿನಿಮಾದ ಚಿತ್ರೀಕರಣದ ಸಮಯವನ್ನು ಗಮನಿಸಿದರೆ, ಈ ಪ್ರಶಸ್ತಿ ಸಮಾರಂಭ ನಡೆದಾಗ ಆಮೀರ್ ಖಾನ್ ಅವರು ತಮ್ಮ 'ಗಜಿನಿ' ಚಿತ್ರದ ಶಾರ್ಟ್ ಹೇರ್ ಸ್ಟೈಲ್ ಹೊಂದಿದ್ದರು. ಅಂದರೆ '3 ಇಡಿಯಟ್ಸ್' ಚಿತ್ರದ ಮುಖ್ಯ ಚಿತ್ರೀಕರಣ ಆರಂಭವಾಗುವ ಮೊದಲೇ ಈ ಕಾರ್ಯಕ್ರಮ ನಡೆದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ, ಸಿನಿಮಾ ಮಾಡುವ ಮುನ್ನ ನನಗೆ ಸೋನಮ್ ವಾಂಗ್‌ಚುಕ್ ಪರಿಚಯವೇ ಇರಲಿಲ್ಲ ಎಂಬ ಆಮೀರ್ ಖಾನ್ ಅವರ ವಾದ ತಪ್ಪು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಸಾಕ್ಷಿ ಸಮೇತ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಆಮೀರ್ ಖಾನ್ ಕಳಕಳಿ ವ್ಯಕ್ತಪಡಿಸಿದ್ದರೂ, ಅವರ ಹಳೆಯ ವಿಡಿಯೋ ಮಾತ್ರ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ.

