
Chiyaan Vikram | ವಯಸ್ಸು 60 ಆದ್ರೂ 20ರ ಲುಕ್ : ಚಿಯಾನ್ ವಿಕ್ರಮ್ ಯಂಗ್ ಲುಕ್ ಹಿಂದಿನ ರಹಸ್ಯವೇನು?
60ರ ಹರೆಯದಲ್ಲೂ 20ರ ಯುವಕನಂತೆ ಮಿಂಚುತ್ತಿದ್ದಾರೆ ನಟ ಚಿಯಾನ್ ವಿಕ್ರಮ್! 'ಅನ್ನಿಯನ್' ಚಿತ್ರದ ರೆಮೋ ಲುಕ್ ನೆನಪಿಸಿದ ವಿಕ್ರಮ್ ಅವರ ಯಂಗ್ ಲುಕ್ ಹಿಂದಿನ ರಹಸ್ಯವೇನು?
ಸಿನಿಮಾ ರಂಗದಲ್ಲಿ ನಟ-ನಟಿಯರು ಸುಂದರವಾಗಿ, ಫಿಟ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ಅಲಿಖಿತ ನಿಯಮ. ತೆರೆಮೇಲೆ ಸ್ಲಿಮ್ ಆಗಿ ಮಿಂಚಲು ನಟರು ಜಿಮ್, ಡಯೆಟ್, ಯೋಗ ಎಂದು ಸರ್ಕಸ್ ಮಾಡುವುದು ಸಾಮಾನ್ಯ. ಆದರೆ, ತಮಿಳು ನಟ ಚಿಯಾನ್ ವಿಕ್ರಮ್ ವಿಷಯಕ್ಕೆ ಬಂದರೆ, ಅವರು ಪ್ರಕೃತಿಗೆ ಸವಾಲು ಹಾಕಿದಂತೆ ಕಾಣುತ್ತಿದ್ದಾರೆ.
'ಅನ್ನಿಯನ್' ರೆಮೋ ನೆನಪಿಸಿದ ವಿಕ್ರಮ್!
ಇತ್ತೀಚೆಗೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಬಂದಿದ್ದ ವಿಕ್ರಮ್ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಬಿಳಿ ಶರ್ಟ್, ಖಾಕಿ ಪ್ಯಾಂಟ್, ಉದ್ದ ಕೂದಲು ಮತ್ತು ಕಣ್ಣಿಗೆ ಕಪ್ಪು ಕನ್ನಡಕ ಧರಿಸಿದ್ದ ವಿಕ್ರಮ್, 20 ವರ್ಷಗಳ ಹಿಂದೆ ತೆರೆಕಂಡ 'ಅನ್ನಿಯನ್' ಚಿತ್ರದ 'ರೆಮೋ' ಪಾತ್ರದಂತೆಯೇ ಕಂಡರು. ಅವರಿಗೆ ಈಗ 60 ವರ್ಷ ಅಂದರೆ ನಂಬಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅವರು ಯುವಕನಂತೆ ಕಂಗೊಳಿಸುತ್ತಿದ್ದಾರೆ.
ಸರ್ಜರಿ ಚಮತ್ಕಾರವೋ ಅಥವಾ ನೈಸರ್ಗಿಕವೋ?
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸುಂದರವಾಗಿ ಕಾಣಲು ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗುವುದುಂಟು. ವಿಕ್ರಮ್ ಕೂಡ ವಿದೇಶದಲ್ಲಿ ಅತ್ಯಾಧುನಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಮತ್ತೊಂದು ವರ್ಗದ ಪ್ರಕಾರ, ವಿಕ್ರಮ್ ಅವರ ಶಿಸ್ತಿನ ಜೀವನಶೈಲಿ, ಪ್ರಕೃತಿ ಚಿಕಿತ್ಸೆ ಮತ್ತು ಕಠಿಣ ಪರಿಶ್ರಮವೇ ಅವರ ಈ 'ಎವರ್ ಗ್ರೀನ್' ಲುಕ್ ಗೆ ಕಾರಣ ಎನ್ನಲಾಗುತ್ತಿದೆ.
ನೋವುಗಳನ್ನ ಗೆದ್ದ ಛಲಗಾರ
ವಿಕ್ರಮ್ ಅವರ ಈ ಅಂದದ ಹಿಂದೆ ದೊಡ್ಡ ನೋವಿನ ಕಥೆಯೂ ಇದೆ. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಬಾರಿ ಗಾಯಗೊಂಡಿದ್ದ ಅವರು, ಹಲವು ಸರ್ಜರಿಗಳಿಗೆ ಒಳಗಾಗಿದ್ದಾರೆ. ಒಂದು ಹಂತದಲ್ಲಿ ವೈದ್ಯರು "ನೀವು ಮೊದಲಿನಂತೆ ನಡೆಯುವುದು ಕಷ್ಟ" ಎಂದು ಹೇಳಿದ್ದರು. ಆದರೆ, ಚಲನಚಿತ್ರದ ಮೇಲಿರುವ ಪ್ರೀತಿ ಅವರನ್ನು ಮತ್ತೆ ಫಿನಿಕ್ಸ್ ನಂತೆ ಎದ್ದು ಬರುವಂತೆ ಮಾಡಿದೆ.
ವಿಕ್ರಮ್ ಅವರ ನಟನೆ ಮತ್ತು ಸ್ಟೈಲ್ ಬಗ್ಗೆ ಎಷ್ಟು ಕ್ರೇಜ್ ಇದೆಯೋ, ಅವರ ಇತ್ತೀಚಿನ ಸಿನಿಮಾಗಳ ಬಗ್ಗೆ ಅಷ್ಟೇ ಬೇಸರವಿದೆ. ಇದಕ್ಕೆ ಕಾರಣ 20 ವರ್ಷಗಳ ಹಿಂದೆ ಬಂದ ಶಂಕರ್ ನಿರ್ದೇಶನದ 'ಅನ್ನಿಯನ್'. 'ಅನ್ನಿಯನ್' ಚಿತ್ರದಲ್ಲಿ ವಿಕ್ರಮ್ ತೋರಿದ ನಟನೆ ಒಂದು ಮೈಲಿಗಲ್ಲು. ಆ ಬಳಿಕ ಅವರು ಎಷ್ಟೇ ವಿಭಿನ್ನ ಗೆಟಪ್, ಮೇಕಪ್ ಹಾಕಿಕೊಂಡು ಬಂದರೂ 'ಅನ್ನಿಯನ್' ಅನ್ನು ಮೀರಿಸಲು ಸಾಧ್ಯವಾಗಿಲ್ಲ.
ವಿಕ್ರಮ್ ಎಷ್ಟೇ ರಿಸ್ಕ್ ತೆಗೆದುಕೊಂಡು ನಟಿಸಿದರೂ, ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ನಾಲ್ಕು ವರ್ಷಗಳ ಹಿಂದೆ ಬಂದ 'ಕೊಬ್ರಾ' ಚಿತ್ರ ಭಾರಿ ನಿರೀಕ್ಷೆ ಮೂಡಿಸಿತ್ತಾದರೂ, ಕೇವಲ ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿತ್ತು. ಪ್ರಸ್ತುತ ಇನ್ನೂ ಟೈಟಲ್ ಫಿಕ್ಸ್ ಆಗದ ಹೊಸ ಚಿತ್ರವೊಂದರಲ್ಲಿ ವಿಕ್ರಮ್ ಬಣ್ಣ ಹಚ್ಚುತ್ತಿದ್ದು, ಈ ಬಾರಿಯಾದರೂ 'ರೆಮೋ' ಬಾಕ್ಸ್ ಆಫೀಸ್‌ನಲ್ಲಿ ಚಮತ್ಕಾರ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

