
ಗಿಲ್ಲಿ ನಟನೆ ಕಿಚ್ಚ ಸುದೀಪ್ ಅವರು ಕಿವಿಮಾತು ಹೇಳಿದ್ದಾರೆ.
ಗಿಲ್ಲಿ ನಟನಿಗೆ ಕಿಚ್ಚನ ಕಿವಿಮಾತು; ನಿಜವಾಯಿತು ಶಿವಣ್ಣನ ಭವಿಷ್ಯ
ಬಿಗ್ ಬಾಸ್ ಮನೆಯಲ್ಲಿ ತನ್ನ ವ್ಯಕ್ತಿತ್ವ ರೂಪಿಸಿದ ಸುದೀಪ್ ಅವರಿಗೆ ಗಿಲ್ಲಿ ಭಾವನಾತ್ಮಕವಾಗಿ ಧನ್ಯವಾದ ಅರ್ಪಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಗಿಲ್ಲಿ ನಟ ಅವರು ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬಿಗ್ ಬಾಸ್ ಪಯಣದುದ್ದಕ್ಕೂ ತಪ್ಪು ಮಾಡಿದಾಗ ಗದರಿಸಿ, ಒಳಿತಾದಾಗ ಬೆನ್ನುತಟ್ಟಿದ್ದ ಕಿಚ್ಚ ಸುದೀಪ್ ಅವರನ್ನು ಭೇಟಿಯಾದ ಗಿಲ್ಲಿ, ತಮ್ಮ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದೀಪ್ ಅವರು "ಗೆಲುವಿನ ಅಮಲಿನಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡ, ಜೀವನದ ಮುಂದಿನ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡು" ಎಂದು ಕಿವಿಮಾತು ಹೇಳಿದ್ದಾರೆ.
ಶಿವಣ್ಣನಿಂದ ಆಶೀರ್ವಾದ
ಇನ್ನೊಂದೆಡೆ ಶಿವರಾಜ್ ಕುಮಾರ್ ಅವರ ಭೇಟಿಯೂ ಕೂಡ ಬಹಳ ವಿಶೇಷವಾಗಿತ್ತು. ಗಿಲ್ಲಿ ಇನ್ನೂ ಸ್ಪರ್ಧೆಯಲ್ಲಿದ್ದಾಗಲೇ ಶಿವಣ್ಣ ಅವರು ಟೇಬಲ್ ತಟ್ಟಿ ʻಗಿಲ್ಲಿ ಗೆದ್ದೇ ಗೆಲ್ಲುತ್ತಾನೆʼ ಎಂದು ಹೇಳಿದ್ದರು. ಶಿವಣ್ಣನ ಈ ನಂಬಿಕೆಯನ್ನು ಗಿಲ್ಲಿ ನಿಜ ಮಾಡಿ ತೋರಿಸಿದ್ದಾರೆ. ಭೇಟಿಯ ವೇಳೆ ಶಿವಣ್ಣ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಗಿಲ್ಲಿ, ಅಂದು ಮನೆಯೊಳಗೆ ಶಿವಣ್ಣನ ಬಗ್ಗೆ ತಾವು ಮಾತನಾಡಿದ್ದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 100ಕ್ಕೂ ಹೆಚ್ಚು ದಿನಗಳ ಕಾಲ ಕಳೆದು, ಜನರ ಮನಗೆದ್ದು ಟ್ರೋಫಿ ಎತ್ತಿದ ಗಿಲ್ಲಿ ನಟ ಮನೆಯೊಳಗೆ ಮಾಡಿದ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿ, ಒಬ್ಬ ಉತ್ತಮ ವ್ಯಕ್ತಿತ್ವದ ಸ್ಪರ್ಧಿಯಾಗಿ ರೂಪಿಸುವಲ್ಲಿ ಸುದೀಪ್ ಅವರ ಪಾತ್ರ ದೊಡ್ಡದಿದೆ. ಫಿನಾಲೆ ವೇದಿಕೆಯ ಮೇಲೆ ʻಸಾಯೋವರೆಗೂ ನಿಮ್ಮನ್ನು ಮರೆಯಲ್ಲʼ ಎಂದು ಭಾವುಕರಾಗಿ ಹೇಳಿದ್ದ ಗಿಲ್ಲಿ, ಇತ್ತೀಚೆಗೆ ಸುದೀಪ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.
ಗಿಲ್ಲಿನಟ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಫೋನ್ ಕರೆ ಮಾಡಿ ಶುಭ ಹಾರೈಸಿದ್ದರು. ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ತನ್ನೂರಿಗೆ ಭವ್ಯ ಮೆರವಣಿಗೆಯ ಮೂಲಕ ತೆರಳುತ್ತಿದ್ದ ಗಿಲ್ಲಿ ನಟನಿಗೆ ಅನಿರೀಕ್ಷಿತವಾಗಿ ಯಶ್ ಅಮ್ಮ ಕರೆ ಮಾಡಿ, ತಾವೂ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ದಿನಾ ವೀಕ್ಷಿಸುತ್ತಿದ್ದು, ಗಿಲ್ಲಿ ಅವರ ಆಟ ಇಷ್ಟವಾಗಿ ತಾವೂ ಸೇರಿದಂತೆ ಮನೆಯವರೆಲ್ಲರೂ ಮತ ಚಲಾಯಿಸಿದ್ದಾಗಿ ತಿಳಿಸಿದರು. ಇದೇ ವೇಳೆ ಗಿಲ್ಲಿ ಅವರಿಗೆ ಒಂದು ಕಿವಿಮಾತನ್ನು ಹೇಳಿದ ಅವರು, "ಕರ್ನಾಟಕದ ಜನರು ನಿನ್ನ ಮೇಲೆ ಇಟ್ಟಿರುವ ಈ ಪ್ರೀತಿಯನ್ನು ಸದಾ ಹೀಗೆಯೇ ಉಳಿಸಿಕೊಂಡು ಹೋಗು, ನಿನಗೆ ಒಳ್ಳೆಯದಾಗಲಿ" ಎಂದು ಹಾರೈಸಿದ್ದರು.

