
ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದಲ್ಲಿ ಕರ್ನಾಟಕದ ವೀರರಾಣಿ ಬೆಳವಾಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್ ಅಭಿನಯಿಸಲಿದ್ದಾರೆ.
ರಿಷಬ್ ಶೆಟ್ಟಿ ಅಭಿನಯದ `ಛತ್ರಪತಿ ಶಿವಾಜಿ ಮಹಾರಾಜʼ ಸಿನಿಮಾಗೆ ಭೂಮಿ ಪೆಡ್ನೇಕರ್ ಎಂಟ್ರಿ
ರಿಷಬ್ ಶೆಟ್ಟಿ ಅಭಿನಯದ 'ದಿ ಪ್ರೈಡ್ ಆಫ್ ಭಾರತ್' ಚಿತ್ರದಲ್ಲಿ ಕರ್ನಾಟಕದ ವೀರರಾಣಿ ಬೆಳವಾಡಿ ಮಲ್ಲಮ್ಮ ಪಾತ್ರದಲ್ಲಿ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ನಟಿಸಲಿದ್ದಾರೆ.
ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸೇರ್ಪಡೆಯಾಗಿದ್ದಾರೆ. ಚಿತ್ರದಲ್ಲಿ ಅವರು ಕರ್ನಾಟಕದ ಹೆಮ್ಮೆಯ ವೀರರಾಣಿ ಬೆಳವಾಡಿ ಮಲ್ಲಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ.
ನಿರ್ದೇಶಕ ಸಂದೀಪ್ ಸಿಂಗ್ ನಿರ್ದೇಶಿಸುತ್ತಿರುವ ಈ ದ್ವಿಭಾಗದ ಚಿತ್ರದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 17ನೇ ಶತಮಾನದಲ್ಲಿ ಮರಾಠ ಸೇನೆಯ ವಿರುದ್ಧ ಹೋರಾಡಿದ ಬೆಳವಾಡಿ ಮಲ್ಲಮ್ಮ ಅವರ ಧೈರ್ಯ, ನಾಯಕತ್ವ ಮತ್ತು ಹೋರಾಟದ ಮನೋಭಾವದಿಂದ ಶಿವಾಜಿ ಮಹಾರಾಜರ ಗೌರವವನ್ನೂ ಗಳಿಸಿದ್ದರೆಂದು ಇತಿಹಾಸ ಹೇಳುತ್ತದೆ.
ಈ ಪಾತ್ರದ ಬಗ್ಗೆ ಮಾತನಾಡಿರುವ ಭೂಮಿ ಪೆಡ್ನೇಕರ್, ಬೆಳವಾಡಿ ಮಲ್ಲಮ್ಮ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ, ಧೈರ್ಯ, ಆತ್ಮವಿಶ್ವಾಸ ಮತ್ತು ಅಚಲ ನಾಯಕತ್ವದ ಪ್ರತೀಕ ಎಂದು ಹೇಳಿದ್ದಾರೆ. ಇಂತಹ ಶ್ರೇಷ್ಠ ಮಹಿಳಾ ಯೋಧಳ ಪಾತ್ರವನ್ನು ನಿರ್ವಹಿಸುವುದು ತಮ್ಮ ಪಾಲಿಗೆ ಗೌರವದ ಜೊತೆಗೆ ದೊಡ್ಡ ಜವಾಬ್ದಾರಿಯೂ ಹೌದು ಎಂದು ಅವರು ತಿಳಿಸಿದ್ದಾರೆ.
ಚಿತ್ರಕಥೆ ಕೇಳಿದ ತಕ್ಷಣವೇ ಈ ಪಾತ್ರದತ್ತ ಆಕರ್ಷಿತರಾದೆ. ಇತಿಹಾಸ ನಿರ್ಮಿಸಿದ ಮಹಿಳೆಯರ ಕಥೆಗಳು ದೊಡ್ಡ ಪರದೆಯಲ್ಲಿ ಹೇಳಲ್ಪಡಬೇಕು ಎಂಬ ನಂಬಿಕೆ ನನಗಿದೆ ಎಂದು ಭೂಮಿ ಹೇಳಿದ್ದಾರೆ. ಇದೇ ವೇಳೆ 'ಕಾಂತಾರ' ಚಿತ್ರದ ಮೂಲಕ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಿದ್ದಾಗಿ ಹೇಳಿರುವ ಅವರು, ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಔರಂಗಜೇಬನ ಪಾತ್ರದಲ್ಲಿ ಅರ್ಜುನ್ ರಾಮ್‌ಪಾಲ್, ಪ್ರಮುಖ ಪಾತ್ರದಲ್ಲಿ ವಿವೇಕ್ ಒಬೆರಾಯ್ ಅಭಿನಯಿಸುತ್ತಿದ್ದಾರೆ. ರಿಷಿ ವಿರ್ಮಾನಿ ಚಿತ್ರಕಥೆ ಬರೆದಿದ್ದು, ರವಿ ವರ್ಮನ್ ಛಾಯಾಗ್ರಹಣ, ಅಮಿತ್ ತ್ರಿವೇದಿ ಸಂಗೀತ ಹಾಗೂ ಪ್ರಸೂನ್ ಜೋಶಿ ಸಾಹಿತ್ಯ ಚಿತ್ರಕ್ಕಿದೆ.
ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಸಿಂಗ್ ನಿರ್ಮಿಸುತ್ತಿರುವ ಈ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನು ಎರಡು ಭಾಗಗಳಲ್ಲಿ ತೆರೆಗೆ ತರುತ್ತಿದೆ. ಬೆಳವಾಡಿ ಮಲ್ಲಮ್ಮ ಪಾತ್ರದ ಮೂಲಕ ಕರ್ನಾಟಕದ ವೀರರಾಣಿ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಪ್ರಯತ್ನವೂ ಈ ಚಿತ್ರದ ವಿಶೇಷವಾಗಿದೆ.

