
ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವೋಟರ್ ಐಡಿ ವಿವಾದ: ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದ ಪ್ರಕಾಶ್ ರಾಜ್
ಹಲವು ರಾಜ್ಯಗಳಲ್ಲಿ ವೋಟರ್ ಐಡಿ ಹೊಂದಿರುವ ಆರೋಪ ಎದುರಿಸುತ್ತಿರುವ ನಟ ಪ್ರಕಾಶ್ ರಾಜ್ ಅವರಿಗೆ ಬೆಂಗಳೂರಿನ ಎಸಿಜೆಎಂ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ರದ್ದುಪಡಿಸಿ, 4,000 ನಗದು ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದೆ.
ಬಹುರಾಷ್ಟ್ರ ಅಥವಾ ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಬೆಂಗಳೂರಿನ ಎಸಿಜೆಎಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಅನ್ನು ಕೋರ್ಟ್ ಹಿಂಪಡೆದಿದೆ.
ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದ ನಟ ನ್ಯಾಯಾಲಯದ ನೋಟಿಸ್‌ಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸದ ಕಾರಣಕ್ಕಾಗಿ ಬೆಂಗಳೂರಿನ 48ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿಗಳ (ACJM) ನ್ಯಾಯಾಲಯವು ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ನಟ ಪ್ರಕಾಶ್ ರೈ ಅವರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು 4,000 ರೂ.ನಗದು ಶ್ಯೂರಿಟಿ ಆಧಾರದ ಮೇಲೆ ಅವರಿಗೆ ಜಾಮೀನು ನೀಡಿದ್ದು, ವಾರಂಟ್ ಅನ್ನು ರದ್ದುಗೊಳಿಸಿದೆ.
ನಮಗೆ ಸಮನ್ಸ್ ತಲುಪಿರಲಿಲ್ಲ ಎಂದ ವಕೀಲರು
ವಿಚಾರಣೆಯ ಸಂದರ್ಭದಲ್ಲಿ ಪ್ರಕಾಶ್ ರಾಜ್ ಪರ ವಕೀಲರು ವಾದ ಮಂಡಿಸಿ, ಈ ಹಿಂದೆ ನ್ಯಾಯಾಲಯದಿಂದ ಹೊರಡಿಸಲಾಗಿದ್ದ ಸಮನ್ಸ್ ನಟನಿಗೆ ತಲುಪಿಯೇ ಇರಲಿಲ್ಲ. ಮಾಧ್ಯಮ ವರದಿಗಳು ಮತ್ತು ಇತರ ಮೂಲಗಳ ಮೂಲಕವಷ್ಟೇ ನಮಗೆ ಈ ಕಾನೂನು ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಯಿತು ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದರು. ಈ ವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ರಹಿತ ವಾರಂಟ್ ಅನ್ನು ಹಿಂಪಡೆಯಲು ಸಮ್ಮತಿಸಿದರು.
ಪ್ರಕರಣದ ಹಿನ್ನೆಲೆ ಏನು?
ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ದೇಶದ ಒಟ್ಟು ನಾಲ್ಕು ರಾಜ್ಯಗಳಲ್ಲಿ ಪ್ರಕಾಶ್ ರೈ ಅವರು ಮತದಾನದ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ 2019 ರಲ್ಲಿ ವಕೀಲ ದಿಲೀಪ್ ಕುಮಾರ್ ಎಂಬುವವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಭಾರತದ ಯಾವುದೇ ನಾಗರಿಕನು ದೇಶದ ಕೇವಲ ಒಂದು ಸ್ಥಳದಲ್ಲಿ ಮಾತ್ರ ಮತದಾರನಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದುವುದು ನಿಯಮಗಳ ಉಲ್ಲಂಘನೆಯಾಗುತ್ತದೆ.
ಪೊಲೀಸರು ಈ ದೂರಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳದಿದ್ದಾಗ, ದೂರುದಾರರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ಭಾರತೀಯ ಚುನಾವಣಾ ಆಯೋಗದ ಮೊರೆ ಹೋಗಿದ್ದರು. ಅಲ್ಲೂ ಯಾವುದೇ ಸ್ಪಂದನೆ ಸಿಗದ ಕಾರಣ ಕೊನೆಗೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎರಡು ಬಾರಿ ಸಮನ್ಸ್ ನೀಡಲಾಗಿದ್ದರೂ ನಟ ಹಾಜರಾಗದ ಕಾರಣ ವಾರಂಟ್ ಜಾರಿಯಾಗಿತ್ತು. ಇದೀಗ ಜಾಮೀನು ದೊರೆಯುವ ಮೂಲಕ ಸದ್ಯದ ಮಟ್ಟಿಗೆ ಪ್ರಕಾಶ್ ರಾಜ್ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

