
ರಣಬಾಲಿ ಚಿತ್ರದಲ್ಲಿ ಮಮ್ಮಿ ಖ್ಯಾತಿಯ ಆರ್ನಾಲ್ಡ್ ಫಸ್ಟ್ ಲುಕ್
ವಿಜಯ್ ದೇವರಕೊಂಡರ 'ರಣಬಾಲಿ' ಚಿತ್ರಕ್ಕೆ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಎಂಟ್ರಿ. ಕ್ರೂರ ವಿಲನ್ 'ಸರ್ ಥಿಯೋಡರ್ ಹೆಕ್ಟರ್' ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಸೆಪ್ಟೆಂಬರ್ 11ಕ್ಕೆ ತೆರೆಗೆ.
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ರಣಬಾಲಿ' ದಿನದಿಂದ ದಿನಕ್ಕೆ ದೊಡ್ಡ ಮಟ್ಟದ ಕುತೂಹಲ ಮೂಡಿಸುತ್ತಿದೆ.
ಈ ಐತಿಹಾಸಿಕ ಆಕ್ಷನ್ ಡ್ರಾಮಾ ಚಿತ್ರಕ್ಕೆ ಈಗ ಹಾಲಿವುಡ್‌ನ ಖ್ಯಾತ ನಟ ಆರ್ನಾಲ್ಡ್ ವೋಸ್ಲೂ ಎಂಟ್ರಿ ಕೊಟ್ಟಿದ್ದು, ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಶಕ್ತಿಶಾಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವರನ್ನು ಭಾರತೀಯ ಚಿತ್ರರಂಗಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿದೆ.
ವಿಶ್ವಪ್ರಸಿದ್ಧ 'ದಿ ಮಮ್ಮಿ' ಮತ್ತು 'ದಿ ಮಮ್ಮಿ ರಿಟರ್ನ್ಸ್' ಚಿತ್ರಗಳಲ್ಲಿ 'ಇಮ್ಹೋಟೆಪ್' ಎಂಬ ಐಕಾನಿಕ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳನ್ನು ನಡುಗಿಸಿದ್ದ ಆರ್ನಾಲ್ಡ್ ವೋಸ್ಲೂ, ಈಗ ರಣಬಾಲಿ ಚಿತ್ರದಲ್ಲಿ ಅತ್ಯಂತ ಕ್ರೂರ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಅವರು 'ಸರ್ ಥಿಯೋಡರ್ ಹೆಕ್ಟರ್'ಎಂಬ ಶಕ್ತಿಶಾಲಿ ಬ್ರಿಟಿಷ್ ಅಧಿಕಾರಿ ಹಾಗೂ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಅವರು ಮೆಟಾಲಿಕ್ ಕೇಪ್ ಧರಿಸಿ, ಹೊಗೆಯ ನಡುವೆ ನಿಗೂಢ ಹಾಗೂ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ದೇವರಕೊಂಡ ಮತ್ತು ಹಾಲಿವುಡ್ ನಟನ ನಡುವಿನ ಮುಖಾಮುಖಿ ಹೇಗಿರಲಿದೆ ಎಂಬ ನಿರೀಕ್ಷೆ ದುಪ್ಪಟ್ಟಾಗಿದೆ. ಆರ್ನಾಲ್ಡ್ ಅವರು 'ಜಿ.ಐ. ಜೋ', 'ಬ್ಲಡ್ ಡೈಮಂಡ್' ಹಾಗೂ ಪ್ರಸಿದ್ಧ ಅಮೆರಿಕನ್ ಸರಣಿ '24' ನಲ್ಲೂ ನಟಿಸಿ ಹೆಸರು ಮಾಡಿದ್ದಾರೆ.
ನಿರ್ದೇಶಕ ರಾಹುಲ್ ಸಂಕೃತ್ಯನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಸಂಸ್ಥೆಗಳು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿವೆ. 19ನೇ ಶತಮಾನದ ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದ (1854 - 1878) ಹಿನ್ನೆಲೆಯನ್ನು ಹೊಂದಿರುವ ಈ ಸಿನಿಮಾ, ಭಾರತೀಯ ಇತಿಹಾಸದ ಮರೆತುಹೋದ ನೈಜ ಘಟನೆಗಳಿಂದ ಪ್ರೇರಿತವಾಗಿದೆ.
ಚಿತ್ರದಲ್ಲಿ ವಿಜಯ್ ದೇವರಕೊಂಡ ಅಪ್ರತಿಮ ಯೋಧನಾಗಿ ಅಬ್ಬರಿಸಲಿದ್ದರೆ, ರಶ್ಮಿಕಾ ಮಂದಣ್ಣ ಅವರು 'ಜಯಮ್ಮ' ಎಂಬ ಸಾಂಪ್ರದಾಯಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 100 ದಿನಗಳ ಚಿತ್ರೀಕರಣ ಪೂರೈಸಿರುವ 'ರಣಬಾಲಿ', ಅಜಯ್-ಅತುಲ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ 'ಓ ಮೇರೆ ಸಾಜನ್' ಹಾಡಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದಲ್ಲಿ ಈ ಅದ್ಧೂರಿ ಚಿತ್ರವು ಸೆಪ್ಟೆಂಬರ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

