ನಿವೃತ್ತಿ ಬಳಿಕ ಅರಿಜಿತ್ ಸಿಂಗ್ ಕಮ್‌ಬ್ಯಾಕ್..  ಆವಾರಾಪನ್ 2ಗೆ ಮತ್ತೆ ಧ್ವನಿ
x

ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದ ಅರಿಜಿತ್ ಸಿಂಗ್ 'ಆವಾರಾಪನ್ 2' ಚಿತ್ರದ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.

ನಿವೃತ್ತಿ ಬಳಿಕ ಅರಿಜಿತ್ ಸಿಂಗ್ ಕಮ್‌ಬ್ಯಾಕ್.. 'ಆವಾರಾಪನ್ 2'ಗೆ ಮತ್ತೆ ಧ್ವನಿ

ಬಾಲಿವುಡ್‌ನ ಗಾಯನ ಗಾರುಡಿಗ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಇಮ್ರಾನ್ ಹಶ್ಮಿ ಅಭಿನಯದ 'ಆವಾರಾಪನ್ 2' ಚಿತ್ರದ ಟೈಟಲ್‌ ಸಾಂಗ್‌ಗೆ ಧ್ವನಿಯಾಗಿದ್ದಾರೆ.


Click the Play button to hear this message in audio format

ಹಿನ್ನೆಲೆ ಗಾಯನದಿಂದ ನಿವೃತ್ತಿಯಾಗುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ್ದ ಖ್ಯಾತ ಗಾಯಕ ಅರಿಜಿತ್ ಸಿಂಗ್ ಇದೀಗ ಮತ್ತೆ ಚಿತ್ರಗೀತೆ ಹಾಡಿರುವ ಸುದ್ದಿ ಹೊರಬಿದ್ದಿದೆ. ಇಮ್ರಾನ್ ಹಾಶ್ಮಿ ಅಭಿನಯದ ಬಹುನಿರೀಕ್ಷಿತ 'ಆವಾರಾಪನ್ 2' ಚಿತ್ರದ 'ಯೇ ಆವಾರಾಪನ್' ಹಾಡಿಗೆ ಅರಿಜಿತ್ ಸಿಂಗ್ ಧ್ವನಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಹಾಡು ಜುಲೈ 21ರಂದು ಬಿಡುಗಡೆಯಾಗಲಿದ್ದು, ನಿವೃತ್ತಿ ಘೋಷಣೆಯ ನಂತರ ಅವರ ಮೊದಲ ಪ್ಲೇಬ್ಯಾಕ್ ಹಾಡಾಗುವ ಸಾಧ್ಯತೆ ಇದೆ.

ವಿಶೇಶ್ ಫಿಲ್ಮ್ಸ್ ಜೊತೆ ಮತ್ತೆ ಒಂದಾದ ಅರಿಜಿತ್

ಚಿತ್ರತಂಡಕ್ಕೆ ಆಪ್ತ ಮೂಲಗಳ ಪ್ರಕಾರ, ನಿರ್ಮಾಪಕ ವಿಶೇಶ್ ಭಟ್ ಅವರು 'ಆವಾರಾಪನ್ 2' ಚಿತ್ರದ ಸಂಗೀತವನ್ನು ಚಿತ್ರದ ಭಾವನಾತ್ಮಕ ಹಿನ್ನೆಲೆಗೆ ಹೊಂದುವಂತೆ ರೂಪಿಸಿದ್ದಾರೆ. ವಿಶೇಷವಾಗಿ 'ಯೇ ಆವಾರಾಪನ್' ಹಾಡು ಚಿತ್ರದ ಪ್ರಮುಖ ಪಾತ್ರ ಶಿವಂ ಪಂಡಿತ್ ಅವರ ಭಾವಲೋಕವನ್ನು ಪ್ರತಿಬಿಂಬಿಸುವಂತೆ ಸಿದ್ಧಪಡಿಸಲಾಗಿದ್ದು, ಅದಕ್ಕೆ ಅರಿಜಿತ್ ಸಿಂಗ್ ಅವರ ಧ್ವನಿ ಮತ್ತಷ್ಟು ಮೆರುಗು ನೀಡಿದೆ ಎಂದು ಹೇಳಲಾಗಿದೆ.

15 ವರ್ಷದ ಯಶಸ್ವಿ ಸಂಗೀತದ ಜೊತೆಯಾಟ

ಅರಿಜಿತ್ ಸಿಂಗ್ ಮತ್ತು ವಿಶೇಶ್ ಫಿಲ್ಮ್ಸ್ ನಡುವಿನ ನಂಟು ಸುಮಾರು 15 ವರ್ಷಗಳಷ್ಟು ಹಳೆಯದು. 2011ರಲ್ಲಿ ಬಿಡುಗಡೆಯಾದ 'ಮರ್ಡರ್ 2' ಚಿತ್ರದ 'ಫಿರ್ ಮೊಹಬ್ಬತ್' ಹಾಡಿನ ಮೂಲಕ ಅರಿಜಿತ್‌ಗೆ ಮೊದಲ ದೊಡ್ಡ ಅವಕಾಶ ನೀಡಿದ್ದು ಇದೇ ನಿರ್ಮಾಣ ಸಂಸ್ಥೆ. ಬಳಿಕ 'ಮುಸ್ಕುರಾನೆ' , 'ಖಾಮೋಶಿಯಾನ್' ಶೀರ್ಷಿಕೆ ಗೀತೆ, 'ಹಮಾರಿ ಅಧೂರಿ ಕಹಾನಿ' ಶೀರ್ಷಿಕೆ ಗೀತೆ ಹಾಗೂ 'ಪಲ್' ಸೇರಿದಂತೆ ಹಲವು ಜನಪ್ರಿಯ ಹಾಡುಗಳಲ್ಲಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿದೆ.

ಜನವರಿಯಲ್ಲಿ ನಿವೃತ್ತಿ ಘೋಷಿಸಿದ್ದ ಅರಿಜಿತ್

ಜನವರಿ 27ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದ ಅರಿಜಿತ್ ಸಿಂಗ್, ಇನ್ನು ಮುಂದೆ ಹೊಸ ಪ್ಲೇಬ್ಯಾಕ್ ಹಾಡುಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದರು. ತಮ್ಮ ಸಂಗೀತ ಪಯಣಕ್ಕೆ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದ ಅವರು, ಇದು ಜೀವನದ ಅದ್ಭುತ ಪಯಣವಾಗಿತ್ತು ಎಂದು ಬರೆದುಕೊಂಡಿದ್ದರು.

ಆಗಸ್ಟ್ 14ಕ್ಕೆ 'ಆವಾರಾಪನ್ 2' ಬಿಡುಗಡೆ

'ಆವಾರಾಪನ್ 2' ಚಿತ್ರದಲ್ಲಿ ಇಮ್ರಾನ್ ಹಾಶ್ಮಿ ಜೊತೆಗೆ ದಿಶಾ ಪಟಾನಿ, ಶಬಾನಾ ಆಜ್ಮಿ, ಸುರೇಂದ್ರ ವಿಕ್ಕಿ, ವಿಜಯಂತ್ ಕೊಹ್ಲಿ ಮತ್ತು ಅತುಲ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಶ್ ಭಟ್ ನಿರ್ಮಿಸಿರುವ ಈ ಚಿತ್ರವನ್ನು ನಿತಿನ್ ಕಕ್ಕರ್ ನಿರ್ದೇಶಿಸಿದ್ದು, ಬಿಲಾಲ್ ಸಿದ್ದೀಕಿ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಸಿನಿಮಾ ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

Read More
Next Story